×
Ad

‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ ರಥ’ ಕಾರ್ಯಕ್ರಮಕ್ಕೆ ಚಾಲನೆ

Update: 2018-07-28 20:18 IST

ಮಂಗಳೂರು, ಜು.28: ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಗ್ರಾಮ ನೈರ್ಮಲ್ಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಕುಡಿಯುವ ನೀರು ಮತ್ತು ನೈರ್ಮಲ್ಯ ಮಂತ್ರಾಲಯವು ‘ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-ರಥ ಕಾರ್ಯಕ್ರಮಕ್ಕೆ ದ.ಕ.ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಶನಿವಾರ ದ.ಕ. ಜಿಪಂ ಆವರಣದಲ್ಲಿ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಆಗಸ್ಟ್ 1ರಿಂದ ಸರಕಾರದಿಂದ ನಿಯೋಜಿತ ಸರ್ವೆ ಏಜೆನ್ಸಿಯ ತಂಡವು ಗ್ರಾಮಗಳಿಗೆ ಭೇಟಿ ನೀಡಿ ನಿಗದಿಗೊಳಿಸಿದ ಮಾನದಂಡಗಳ ಅನ್ವಯ ಪರಿಶೀಲಿಸಿ ನೈರ್ಮಲ್ಯದ ಬಗ್ಗೆ ಮೌಲ್ಯಮಾಪನ ಮಾಡಿ ಜಿಲ್ಲೆಗಳಿಗೆ ಶ್ರೇಣಿಯನ್ನು ನೀಡಲಿದ್ದಾರೆ. ಈ ಸಂದರ್ಭ ಸಾರ್ವಜನಿಕರು ಸಹಕರಿಸುವುದರಿಂದ ರಾಷ್ಟ್ರದಲ್ಲೇ ಜಿಲ್ಲೆ ಅಗ್ರ ಶ್ರೇಣಿ ಪಡೆಯಲು ಸಾಧ್ಯವಾಗಲಿದೆ ಎಂದರು.

ಸಾರ್ವಜನಿಕ ಸ್ಥಳಗಳು, ಶಾಲೆಗಳು, ಅಂಗನವಾಡಿ ಕೇಂದ್ರಗಳು, ಸಂತೆ ನಡೆಯುವ ಸ್ಥಳ, ಕುಡಿಯುವ ನೀರು ಸಂಗ್ರಹ ಸ್ಥಳಗಳು, ಪಂಚಾಯತ್ ಕಚೇರಿ, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಗ್ರಾಮದ ಮುಖ್ಯಬೀದಿಗಳಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಶೌಚಾಲಯಗಳನ್ನು ಸುಸ್ಥಿತಿಯಲ್ಲಿಡುವಂತೆ ಹಾಗೂ ಸ್ವಚ್ಛತೆ ಶುಚಿತ್ವವನ್ನು ಕಾಪಾಡುವ ಮೂಲಕ ಸ್ವಚ್ಛ ಸರ್ವೇಕ್ಷಣ ಗ್ರಾಮೀಣ-2018ರ ಕಾರ್ಯಕ್ರಮ ಯಶಸ್ವಿಗೊಳಿಸಲು ಮೀನಾಕ್ಷಿ ಶಾಂತಿಗೋಡು ಮನವಿ ಮಾಡಿದರು. ದ.ಕ.ಜಿಪಂ ಸಿಇಒ ಡಾ.ಎಂ.ಆರ್. ರವಿ ಹಾಗೂ ಜಿಪಂ ಅಧಿಕಾರಿ, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News