×
Ad

ಸಮ್ಮಿಶ್ರ ಸರ್ಕಾರದಿಂದ ಮುಸ್ಲಿಮರ ಕಡೆಗಣನೆ: ಇಕ್ಬಾಲ್ ಬೆಳ್ಳಾರೆ

Update: 2018-07-28 20:39 IST

ಪುತ್ತೂರು, ಜು. 28: ಚುನಾವಣಾ ಪ್ರಣಾಳಿಕೆಯಲ್ಲಿ ಅಲ್ಪ ಸಂಖ್ಯಾತರಿಗೆ ಬಹಳಷ್ಟು ಆಶ್ವಾಸನೆಗಳನ್ನು ನೀಡಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಇದೀಗ ಸಮ್ಮಿಶ್ರ ಸರ್ಕಾರ ರಚಿಸಿದ ಬಳಿಕ ಬಜೆಟ್‌ನಲ್ಲಿ ಯಾವುದೇ ಯೋಜನೆಯನ್ನು ನೀಡದೆ ಈ ಪಕ್ಷವನ್ನು ಅಧಿಕಾರಕ್ಕೆ ತಂದಿರುವ ಮುಸ್ಲಿಂ ಸಮುದಾಯವನ್ನು ಕಡೆ ಗಣಿಸಿದೆ ಎಂದು ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಆರೋಪಿಸಿದ್ದಾರೆ.

ಅವರು ಶನಿವಾರ ಪುತ್ತೂರಿನ ಮಿನಿ ವಿಧಾನ ಸೌಧದ ಮುಂಬಾಗದಲ್ಲಿ ಎಸ್‌ಡಿಪಿಐ ವತಿಯಿಂದ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಅಲ್ಪಸಂಖ್ಯಾತ ಸಮುದಾಯಕ್ಕೆ ವಿಶೇಷ ಯೋಜನೆಗಳನ್ನಾಗಲೀ, ಪ್ಯಾಕೇಜ್‌ಗಳನ್ನಾಗಲೀ ನೀಡದೆ ಇದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಮುಂದುವರಿದ ಭಾಗವಾದ ಬಜೆಟ್ ಎನ್ನುತ್ತಿದೆ. ಆದರೆ ಕಾಂಗ್ರೆಸ್ ಸರ್ಕಾರ ಈ ಹಿಂದೆ ಜಾರಿಗೆ ತಂದಿದ್ದ ಅನ್ನ ಭಾಗ್ಯ ಯೋಜನೆಯ ಅಕ್ಕಿಯಲ್ಲಿ 2 ಕೆಜಿ ಅಕ್ಕಿಯನ್ನು ಕಡಿತ ಮಾಡಿದೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಸುವ ಮೂಲಕ ಬಡವರಿಗೆ ಮತ್ತಷ್ಟು ಹೊರೆ ಮಾಡುವ ಮೂಲಕ ಶ್ರೀಮಂತರ ಪರ ಎಂಬುವುದನ್ನು ತೋರಿಸಿಕೊಟ್ಟಿದೆ ಎಂದು ಆರೋಪಿಸಿದರು.

ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಮಾತನಾಡಿ ಮುಸ್ಲಿಂ,ಕ್ರಿಶ್ಚಿಯನ್, ದಲಿತರ ಶತ್ರುವಾದ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಪ್ಪಿಸಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದಾಗ ನಾವೆಲ್ಲಾ ಖುಷಿ ಪಟ್ಟಿದ್ದೆವು. ಆದರೆ ಜಾತ್ಯಾತೀತ ಪಕ್ಷದವರೇ ಇದೀಗ ಕಡೆಗಣಿಸಿರುವಾಗ ನಾವೆಲ್ಲಾ ಎಚ್ಚೆತ್ತುಕೊಂಡು ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗಿದೆ ಎಂದರು, ಬರುವ ಸಂಪುಟ ಸಭೆಯಲ್ಲಿ ಬಜೆಟ್‌ನಲ್ಲಿ ಆದ ತಪ್ಪನ್ನು ತಿದ್ದಿಕೊಂಡು ನಮ್ಮ ಸಮುದಾಯಕ್ಕೆ 5 ಸಾವಿರ ಕೋಟಿ ರೂ. ಅನುದಾನ ಮೀಸಲಿಡಬೇಕೆಂದು ಆಗ್ರಹಿಸಿದ ಅವರು ಸರ್ಕಾರ ತಪ್ಪುಗಳನ್ನು ಪದೇ ಪದೇ ಮುಂದುವರಿಸಿದರೆ ನಾವು ಪ್ರತೀ ದಿನವೂ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎಸ್‌ಡಿಪಿಐ ತಾಲೂಕು ಅಧ್ಯಕ್ಷ ಜಾಬೀರ್ ಅರಿಯಡ್ಕ ಅವರು ಮಾತನಾಡಿ 2009ರಲ್ಲಿ ಮದ್ರಸಗಳಲ್ಲಿ ಭಯೋತ್ಪಾದನೆ ನಡೆಯುತ್ತಿದೆ ಎಂಬ ವಿಷವನ್ನು ಭಿತ್ತಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಇದೀಗ ಬಜೆಟ್‌ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಬಜೆಟ್‌ನಲ್ಲಿ ಒಂದು ರುಪಾಯಿಯನ್ನೂ ಇಡದೆ ತಾನು ಮುಸ್ಲಿಂ ವಿರೋಧಿ ಎಂಬುವುದನ್ನು ಸ್ಪಷ್ಟಪಡಿಸಿದ್ದಾರೆ. ತಮ್ಮ ಪಕ್ಷಕ್ಕೆ ಮತ ನೀಡುವ ಅಲ್ಪಸಂಖ್ಯಾತರಿಗೆ ಅನ್ಯಾಯವಾಗುತ್ತಿದ್ದರೂ ‘ವೈಟ್ ಕಾಲರ್’ ರಾಜಕಾರಣಿಗಳು ಸುಮ್ಮನೆ ಕುಳಿತಿದ್ದಾರೆ ಎಂದು ಆರೋಪಿಸಿದರು.

ಎಸ್‌ಡಿಪಿಐ ತಾಲೂಕು ಸಮಿತಿ ಕಾರ್ಯದರ್ಶಿ ಹಮೀದ್ ಹಾಜಿ ಮೆಜೆಸ್ಟಿಕ್, ಕೋಶಾಧಿಕಾರಿ ಅಶ್ರಫ್ ಬಾವು, ಉಪಾಧ್ಯಕ್ಷ ಸಾಗರ್ ಇಬ್ರಾಹಿಂ, ನಗರ ಸಮಿತಿಯ ಅಧ್ಯಕ್ಷ ಹಂಝ ಅಫ್‌ನಾನ್, ಎಸ್‌ಡಿಎಯು ಸಂಘಟನೆಯ ತಾಲ್ಲೂಕು ಅಧ್ಯಕ್ಷ ಮಹಮ್ಮದ ಕುಂಞಿ, ಎಸ್‌ಡಿಪಿಐ ತಾಲ್ಲೂಕು ಸಮಿತಿಯ ಪ್ರಮುಖರಾದ ಪಿ.ಬಿ.ಕೆ. ಮಹಮ್ಮದ್, ನಾಗೇಶ್ ಕುರಿಯ, ಅದ್ದು ಕೊಡಿಪ್ಪಾಡಿ, ಹಮೀದ್ ಸಾಲ್ಮರ, ವಿಟ್ಲ ವಲಯ ಸಮಿತಿಯ ಅಧ್ಯಕ್ಷ ಶಾಕೀರ್ ಅಳಕೆಮಜಲು, ಕಬಕ ವಲಯಾಧ್ಯಕ್ಷ ಉಮ್ಮರ್ ಪಾರೂಕ್, ಆರ್ಯಾಪು ವಲಯಾಧ್ಯಕ್ಷ ರಿಯಾಝ್, ನರಿಮೊಗರು ವಲಯಾಧ್ಯಕ್ಷ ಆಸೀಫ್ ಬಡಕ್ಕೋಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News