×
Ad

ಪೊಲೀಸರ ತನಿಖೆಗೆ ಕೇಂದ್ರಬಿಂದುವಾಗಿರುವ ಶಿರೂರು ಸ್ವಾಮೀಜಿ ದೇಹದಲ್ಲಿ ಪತ್ತೆಯಾದ ವಿಷ !

Update: 2018-07-28 21:45 IST

ಉಡುಪಿ, ಜು.28: ಶಿರೂರು ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿಯ ಸಾವಿಗೆ ಮುಖ್ಯ ಅಂಶವಾಗಿರುವುದು ಅವರ ದೇಹದೊಳಗೆ ಪತ್ತೆಯಾಗಿರುವ ವಿಷ. ಆದುದರಿಂದ ಪೊಲೀಸರು ಈ ಬಗ್ಗೆ ಗಮನ ಕೇಂದ್ರೀಕರಿಸಿ, ಅವರ ದೇಹ ದೊಳಗೆ ವಿಷ ಹೇಗೆ ಪ್ರವೇಶಿಸಿತೆಂಬ ದಿಕ್ಕಿನಲ್ಲಿ ತನಿಖೆಯನ್ನು ಚುರುಕುಗೊಳಿಸಿ ದ್ದಾರೆ.

ಈ ಪ್ರಕರಣ ಹಲವು ಆಯಾಮಗಳನ್ನು ಹೊಂದಿದ್ದರೂ ಪೊಲೀಸರಿಗೆ ಅವರ ಸಾವಿಗೆ ಮೂಲ ಕಾರಣವಾಗಿರುವ ವಿಷದ ಅಂಶವೇ ಮುಖ್ಯವಾಗಿದೆ. ಆದುದರಿಂದ ಪೊಲೀಸರು ಇದರತ್ತ ತಮ್ಮ ಗಮನವನ್ನು ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದಾರೆ. ವೈದ್ಯರು ಆರಂಭದಲ್ಲಿ ನೀಡಿರುವ ವರದಿಯಂತೆ ಸ್ವಾಮೀಜಿ ದೇಹದಲ್ಲಿ ಪತ್ತೆಯಾಗಿರುವುದು ಬಾಹ್ಯ ಅಥವಾ ಆಂತರಿಕ ವಿಷವೇ ಎಂಬುದು ಇನ್ನೂ ಕಗ್ಗಂಟಾಗಿದೆ. ಇದಕ್ಕಾಗಿ ಪೊಲೀಸ್ ತಂಡವು ತಜ್ಞ ವೈದ್ಯರ ತಂಡದೊಂದಿಗೆ ಸಮಾಲೋಚನೆ ಕೂಡ ನಡೆಸುತ್ತಿದೆ ಎನ್ನಲಾಗಿದೆ.

ಅಂತಿಮ ಘಟ್ಟದಲ್ಲಿರುವ ಮರಣೋತ್ತರ ಪರೀಕ್ಷೆ ವರದಿಯು ಜು.30ರಂದು ಪೊಲೀಸರ ಕೈಸೇರುವ ಸಾಧ್ಯತೆ ಇದೆ. ವಿಷದ ಅಂಶವು ಸ್ವಾಮೀಜಿಯ ದೇಹ ದೊಳಗೆ ವಿವಿಧ ಮೂಲಗಳಿಗೆ ಪ್ರವೇಶಿಸಿರುವ ಸಾಧ್ಯತೆ ಇರುವುದರಿಂದ ಅವರ ಪ್ರತಿಯೊಂದು ಅಂಗಾಂಗಗಳನ್ನು ಪ್ರತ್ಯೇಕ ತಜ್ಞ ವೈದ್ಯರಿಂದ ಪರೀಕ್ಷೆಗೆ ಒಳಪಡಿಸಿ ವರದಿ ಪಡೆದುಕೊಳ್ಳಲಾಗುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಮದ್ಯ ಸೇರಿದಂತೆ ವಿವಿಧ ಮಾದಕ ವಸ್ತುಗಳ ಸೇವನೆಯ ಚಟ ಹೊಂದಿದ್ದ ಸ್ವಾಮೀಜಿಯ ಲೀವರ್(ಯಕೃತ್) ಸಂಪೂರ್ಣ ಹದಗೆಟ್ಟಿದ್ದು, ಇದರಿಂದಲೇ ಹೊಟ್ಟೆಯೊಳಗೆ ರಕ್ತಸ್ರಾವ ಉಂಟಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ಮೂಲಗಳು ಹೇಳಿವೆ. ಆದರೆ ಇವರ ದೇಹದೊಳಗೆ ವಿಷ ಹೇಗೆ ಪ್ರವೇಶಿಸಿದೆ ಎಂಬುದೇ ಇನ್ನೂ ಕೂಡ ಪೊಲೀಸರಿಗೆ ದೊಡ್ಡ ಯಕ್ಷ ಪ್ರಶ್ನೆಯಾಗಿದೆ.

ಇದೇ ಕಾರಣಕ್ಕೆ ಮೂಲಮಠದಲ್ಲಿರುವ ಸ್ವಾಮೀಜಿಯ ಕೋಣೆಯೊಳಗಿನ ಕೆಲವೊಂದು ಮಾದರಿಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯ ತಜ್ಞರು ಎರಡನೆ ಬಾರಿ ಬಂದು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಆದುದರಿಂದ ಈಗ ಪೊಲೀಸರ ತನಿಖೆಗೆ ಶಿರೂರು ಸ್ವಾಮೀಜಿಯ ಆಪ್ತ ಮಹಿಳೆ ಹಾಗೂ ಡಿವಿಆರ್‌ಗಳು ಮುಖ್ಯವಾಗುತ್ತಿಲ್ಲ; ಸ್ವಾಮೀಜಿಯ ದೇಹದೊಳಗೆ ವಿಷ ಹೇಗೆ ಪ್ರವೇಶಿಸಿತೆಂಬುದನ್ನು ಪತ್ತೆ ಹಚ್ಚಲು ಪೊಲೀಸರಿಗೆ ಇವು ಸಹಕಾರಿಯಾಗಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News