×
Ad

ಮೂಲಮಠದಲ್ಲಿ ಶಿರೂರು ಶ್ರೀ ಆರಾಧನೆಗೆ ಪೊಲೀಸರಿಂದ ಅವಕಾಶ ನಿರಾಕರಣೆ

Update: 2018-07-28 21:48 IST

ಉಡುಪಿ, ಜು.28: ಶಿರೂರು ಮಠದ ಧ್ವಂದ್ವ ಮಠವಾಗಿರುವ ಸೋದೆ ಮಠವು ಜು. 31ರಂದು ಶಿರೂರು ಮೂಲಮಠದಲ್ಲಿ ನಡೆಸಲು ಉದ್ದೇಶಿಸಿದ್ದ ಶಿರೂರು ಸ್ವಾಮೀಜಿಯ ಆರಾಧನೆಗೆ ತನಿಖೆಯ ದೃಷ್ಠಿಯಿಂದ ಪೊಲೀಸರು ಅವಕಾಶ ನಿರಾಕರಿಸಿದರೆನ್ನಲಾಗಿದೆ.

ಶಿರೂರು ಸ್ವಾಮೀಜಿಯ ಸಾವಿನ ನಂತರ ಜು.20ರಿಂದ ಶಿರೂರು ಮೂಲ ಮಠವನ್ನು ತನಿಖೆಯ ಉದ್ದೇಶಕ್ಕಾಗಿ ಪೊಲೀಸರು ತಮ್ಮ ಸುಪರ್ದಿಗೆ ಪಡೆದು ಕೊಂಡಿದ್ದರು. ಅದರ ನಂತರ ಈ ಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸ ಲಾಗಿತ್ತು. ಇದೀಗ ಸೋದೆ ಸ್ವಾಮೀಜಿ ನೂರಾರು ಮಂದಿಯನ್ನು ಸೇರಿಸಿ ನಡೆ ಸುವ ಶಿರೂರು ಸ್ವಾಮೀಜಿಯ ಆರಾಧನೆಯಿಂದ ತನಿಖೆಗೆ ತೊಂದರೆ ಹಾಗೂ ಕೆಲವೊಂದು ಸಾಕ್ಷ್ಯಗಳು ನಾಶವಾಗಬಹುದೆಂಬ ಕಾರಣಕ್ಕೆ ಈ ಅವಕಾಶ ನಿರಾಕರಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶಿರೂರು ಸ್ವಾಮೀಜಿ ಮೂಲಮಠದಲ್ಲೇ ಕಳೆದ ಎರಡು ವರ್ಷಗಳಿಂದ ವಾಸವಾಗಿ, ಅಲ್ಲಿಯೇ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವುದರಿಂದ ಕೆಲ ವೊಂದು ಸಾಕ್ಷಗಳು ಅವರ ಕೋಣೆಗಳಲ್ಲಿವೆ ಎಂಬ ಮಾಹಿತಿ ತಿಳಿದುಬಂದಿದೆ. ಅವರ ಆರಾಧನೆ ಮಾಡುವುದರಿಂದ ಅವುಗಳು ನಾಶವಾಗಿ ಮುಂದೆ ತನಿಖೆಗೆ ತೊಂದರೆಯಾಗುವ ಸಾಧ್ಯತೆ ಇದೆ ಎಂಬುದನ್ನು ಪೊಲೀಸರು ಮನಗಂಡಿದ್ದಾರೆ. ಅಲ್ಲದೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರಿಗೂ ಸಮಸ್ಯೆಯಾಗುವ ಸಾಧ್ಯತೆಗಳಿವೆ. ಅಲ್ಲದೆ ಮುಂದೆ ಉನ್ನತ ಮಟ್ಟದ ತನಿಖೆ ನಡೆದರೆ ಆ ಸಂದರ್ಭ ದಲ್ಲೂ ಇವುಗಳ ಅವಶ್ಯಕತೆ ಇರುತ್ತದೆ. ಈ ಎಲ್ಲ ಕಾರಣಗಳನ್ನು ಗಮನದಲ್ಲಿ ಇರಿಸಿಕೊಂಡು ಈ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ ಎಂದು ತಿಳಿದು ಬಂದಿದೆ.

ಡಿವಿಆರ್‌ಗಳು ಪತ್ತೆ: ಉಡುಪಿ ಶಿರೂರು ಮಠ ಹಾಗೂ ಹಿರಿಯಡ್ಕ ಸಮೀಪ ಇರುವ ಮೂಲಮಠಗಳಿಂದ ನಾಪತ್ತೆಯಾಗಿದ್ದ ಸಿಸಿ ಕ್ಯಾಮೆರಾದ ಮೂರು ಡಿವಿಆರ್‌ಗಳು ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ಖಚಿತ ಪಡಿಸಿವೆ.

ಸ್ವಾಮೀಜಿಗೆ ಸಂಬಂಧಿಸಿದ ಕೆಲವೊಂದು ಮಾಹಿತಿಗಳು ಸೋರಿಕೆಯಾಗ ಬಹುದೆಂಬ ಭೀತಿಯಲ್ಲಿ ಮಠಕ್ಕೆ ಸಂಬಂಧಿಸಿದವರೆ ಈ ಡಿವಿಆರ್‌ಗಳನ್ನು ನಂತರ ಸ್ವರ್ಣ ನದಿಗೆ ಎಸೆದಿದ್ದಾರೆನ್ನಲಾಗಿದೆ. ಅದರ ಹುಡುಕಾಟಕ್ಕಾಗಿ ಪೊಲೀಸರು ಉಳ್ಳಾಲದಿಂದ ಮುಳುಗು ತಜ್ಞರನ್ನು ಕರೆಸಿ ಪತ್ತೆ ಹಚ್ಚಿ ಬೆಂಗಳೂರಿನಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ ನೀರು ಪಾಲಾಗಿದ್ದ ಈ ಡಿವಿಆರ್‌ಗಳಿಂದ ವಿಡಿಯೋ ಫುಟೇಜ್‌ಗಳನ್ನು ಪಡೆಯುವುದು ಕಷ್ಟ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News