ಪ್ರಮುಖ ಯೋಜನೆಗಳಲ್ಲಿ ವಿಳಂಬ: ಜಲಸಂಪನ್ಮೂಲ ಸಚಿವಾಲಯಕ್ಕೆ ಸಿಎಜಿ ತರಾಟೆ

Update: 2018-07-28 16:56 GMT

ಹೊಸದಿಲ್ಲಿ, ಜು.28: ದೇಶದ ಪ್ರಮುಖ ಜಲಯೋಜನೆಗಳು ವಿಳಂಬವಾಗಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಭಾರತೀಯ ಕಾಂಪ್ಟ್ರೋಲರ್ ಮತ್ತು ಆಡಿಟ್ ಜನರಲ್ (ಸಿಎಜಿ) ಜಲಸಂಪನ್ಮೂಲ ಸಚಿವಾಲಯವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ತೀಸ್ತಾ ಬರಾಜ್, ಇಂದಿರಾ ಸಾಗರ್ ಪೋಲಾವರಮ್ ಹಾಗೂ ಗೋಸಿಖಂಡ್ ನೀರಾವರಿ ಯೋಜನೆಗಳು ಸದ್ಯ ದೇಶದಲ್ಲಿ ನಡೆಯುತ್ತಿರುವ ಐದು ಬೃಹತ್ ಜಲಯೋಜನೆಗಳಲ್ಲಿ ಪ್ರಮುಖವಾಗಿವೆ. ರಾಷ್ಟ್ರೀಯ ಪ್ರಾಮುಖ್ಯತೆ ಹೊಂದಿರುವ ಈ ಜಲಯೋಜನೆಗಳಿಗೆ 2008ರಿಂದ ಇಲ್ಲಿಯವರೆಗೆ 13,000 ಕೋಟಿ ರೂ. ವ್ಯಯಿಸಲಾಗಿದ್ದರೂ ಇನ್ನೂ ಸಂಪೂರ್ಣಗೊಳ್ಳುವ ಲಕ್ಷಣಗಳು ಕಾಣುತ್ತಿಲ್ಲ ಎಂದು ಸಿಎಜಿ ದೂರಿದ್ದಾರೆ. ವಿಳಂಬದಿಂದಾಗಿ ವೆಚ್ಚದಲ್ಲಿ ಆಗಿರುವ ಗಣನೀಯ ಏರಿಕೆಯತ್ತ ಬೆಟ್ಟು ಮಾಡಿರುವ ರಾಷ್ಟ್ರೀಯ ಆಡಿಟರ್ ಈ ಐದು ಯೋಜನೆಗಳಿಗೆ ಅಂದಾಜು ಮಾಡಲಾಗಿದ್ದ ಹಿಂದಿನ ವೆಚ್ಚ 3530 ಕೋಟಿ ರೂ. ಆಗಿದ್ದರೆ ಸದ್ಯದ ಅಂದಾಜು ವೆಚ್ಚ 86,172 ಕೋಟಿ ರೂ. ತಲುಪಿದೆ ಎಂದು ತಿಳಿಸಿದ್ದಾರೆ.

ಜಲಸಂಪನ್ಮೂಲ ಸಚಿವಾಲಯ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುತ್ಥಾನಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡ ಸಿಎಜಿ, ಪ್ರಮುಖ ಯೋಜನೆಗಳ ಕಳಪೆ ಅನುಷ್ಠಾನದಿಂದ ದೇಶದ ಹಿತಾಸಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀಳುತ್ತದೆ. ಇದರಿಂದ ಯೋಜನೆಯಿಂದ ಉಂಟಾಗುವ ವಿದ್ಯುತ್ ಉತ್ಪಾದನೆ, ಕುಡಿಯುವ ನೀರು ಮತ್ತು ಜಲಾಶಯಗಳ ಲಾಭವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದಾರೆ. ಆಂಧ್ರ ಪ್ರದೇಶದ ಇಂದಿರಾ ಸಾಗರ್ ಪೋಲಾವರಮ್ ಯೋಜನೆ, ಮಹಾರಾಷ್ಟ್ರದ ಗೋಸಿಖಂಡ್ ನೀರಾವರಿ ಯೋಜನೆ, ಪಂಜಾಬ್‌ನ ಶಹಿಪುರ ಕಂಡಿ ಅಣೆಕಟ್ಟು, ಉತ್ತರ ಪ್ರದೇಶದ ಸರ್ಯೂ ನಹರ್ ಪರಿಯೋಜನಾ ಹಾಗೂ ಪಶ್ಚಿಮ ಬಂಗಾಳದ ತೀಸ್ತಾ ಬರಾಜ್ ಸದ್ಯದ ಪ್ರಮುಖ ಐದು ಜಲಯೋಜನೆಗಳಾಗಿವೆ. ಈ ಯೋಜನೆಗಳ ಮುಖ್ಯ ಉದ್ದೇಶ ನೀರಾವರಿ ಒದಗಿಸುವ ಮೂಲಕ ಕೃಷಿ ಉತ್ಪಾದನೆ ಹೆಚ್ಚು ಮಾಡುವುದು ಮತ್ತು ಸುತ್ತಮುತ್ತಲ ಪ್ರದೇಶಗಳಿಗೆ ನೀರು ಪೂರೈಸುವುದಾಗಿದೆ. ಆದರೆ ಈ ಯೋಜನೆಗಳು ಕಳಪೆ ಗುತ್ತಿಗೆ ನಿರ್ವಹಣೆ ಮತ್ತು ಆಡಳಿತಾತ್ಮಕ ಸಮಸ್ಯೆಗಳಿಂದ ವಿಳಂಬವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News