×
Ad

ಸಾರ್ವಜನಿಕ ಸುರಕ್ಷತಾ ಕಾಯ್ದೆ ಅನುಷ್ಠಾನಕ್ಕೆ ಆದ್ಯತೆ: ಡಿಸಿಪಿ ಹನುಮಂತರಾಯ

Update: 2018-07-29 19:49 IST

ಮಂಗಳೂರು, ಜು.29: ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ನು ನಗರ ಪೊಲೀಸ್ ಆಯುಕ್ತಾಲಯ ವ್ಯಾಪ್ತಿಯಲ್ಲಿ ಅನುಷ್ಠಾನಗೊಳಿಸಲು ಆದ್ಯತೆ ನೀಡಲಾಗುವುದು ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಉಪ ಆಯುಕ್ತ ಹನುಮಂತರಾಯ ಹೇಳಿದ್ದಾರೆ.

ಮಂಗಳೂರು ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ಜರುಗಿದ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಕುಂದುಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಸಾರ್ವಜನಿಕ ವಲಯದಲ್ಲಿ ಸುರಕ್ಷತಾ ಕ್ರಮಗಳ ಅಗತ್ಯವಿದೆ. ಇದರಿಂದ ಕೆಲವು ದುಷ್ಕೃತ್ಯಗಳನ್ನು ತಡೆಯಬಹುದು ವ್ಯಕ್ತಿಯೊಬ್ಬರು ಅಭಿಪ್ರಾಯಪಟ್ಟರು. ಇದಕ್ಕೆ ಪ್ರತಿಕ್ರಿಯಿಸಿದ ಹನುಮಂತರಾಯ ರಾಜ್ಯದಲ್ಲಿ ನೂತನವಾಗಿ ರೂಪಿಸಿದ ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆ ಜಾರಿಗೊಳಿಸಲು ಸಿದ್ಧತೆ ನಡೆದಿದೆ ಎಂದರು.

ನೂತನ ಕಾಯ್ದೆಯನ್ವಯ ವಸತಿ ಸಮುಚ್ಛಯಗಳು, ವಾಣಿಜ್ಯ ಸಂಕೀರ್ಣಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆ ಕಡ್ಡಾಯವಾಗಲಿದೆ. ನಿರ್ದಿಷ್ಟ ಸಾಮರ್ಥ್ಯ ಮತ್ತು ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಬಗ್ಗೆಯೂ ಕಾಯ್ದೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಹಾಗಾಗಿ ಕಾಯ್ದೆಯನ್ನು ಉಲ್ಲಂಸಿದರೆ ಮೊದಲ ಬಾರಿ 5,000 ರೂ, ಎರಡನೆಯ ಬಾರಿ 10,000 ರೂ. ದಂಡ ವಿಧಿಸಬಹುದಾಗಿದೆ. ಮತ್ತೆಯೂ ಕಾಯ್ದೆಯನ್ನು ನಿರ್ಲಕ್ಷಿಸಿದರೆ ಪರವಾನಗಿಯನ್ನು ತಾತ್ಕಾಲಿಕವಾಗಿ ಅಮಾನತು ಮಾಡುವ ಅಧಿಕಾರವನ್ನು ಸ್ಥಳೀಯ ಪ್ರಾಧಿಕಾರಕ್ಕೆ ನೀಡಲಾಗಿದೆ. ಸಹಾಯಕ ಪೊಲೀಸ್ ಆಯುಕ್ತರು ಅಥವಾ ಪೊಲೀಸ್ ಉಪಾಧೀಕ್ಷಕರು ಕಾಯ್ದೆ ಜಾರಿಯ ಅಧಿಕಾರ ಹೊಂದಿರುತ್ತಾರೆ ಎಂದು ಹನಮಂತರಾಯ ಮಾಹಿತಿ ನೀಡಿದರು.

ಕುಲಶೇಖರ, ಕೋಟಿಮುರ, ಮೇರ್ಲಪದವು, ಸರಿಪಳ್ಳ ಮತ್ತಿತರ ಕಡೆೆಗಳಲ್ಲಿ ಗಾಂಜಾ ಹಾವಳಿ ಮಿತಿಮೀರಿದೆ. ಮಧ್ಯಾಹ್ನ ಮತ್ತು ಸಂಜೆ ಪೊಲೀಸ್ ಗಸ್ತು ಹೆಚ್ಚಿಸಬೇಕು ಎಂದು ಮುಖೇಶ್ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹನುಮಂತರಾಯ ಪ್ರತಿಯೊಂದು ಪೊಲೀಸ್ ಠಾಣೆಗಳ ಅಧಿಕಾರಿಗಳು ಮಾದಕ ವಸ್ತುಗಳ ಬಗ್ಗೆ ಪ್ರಕರಣ ದಾಖಲಿಸಬೇಕು. ಮಾದಕ ದ್ರವ್ಯದ ಬಗ್ಗೆ ಸಿಸಿಬಿ ಅಥವಾ ಮಾದಕ ವಸ್ತು ಪತ್ತೆದಳದ ಕಾರ್ಯ ಎಂದು ಇತರ ಠಾಣಾ ಪೊಲೀಸರು ಭಾವಿಸಬಾರದು ಎಂದು ಹೇಳಿದರು.

ಮಾದಕ ವಸ್ತುಗಳ ಬಳಕೆ, ಗಾಂಜಾ ಹಾವಳಿಯ ಬಗ್ಗೆ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಗಾಂಜಾ ಜಾಲದಲ್ಲಿ ಸಕ್ರಿಯರಾಗಿರುವವರಲ್ಲದೆ ಗ್ರಾಹಕರನ್ನು ಕೂಡಾ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಿಸಿಪಿ ಹನುಮಂತರಾಯ ಸ್ಪಷ್ಟಪಡಿಸಿದರು.

ಯಾದಗಿರಿ ಮೂಲದ ಎಲ್ಲಮ್ಮ ಮಾತನಾಡಿ, ಪತಿ ಪರಶುರಾಮ ನಂತೂರಿನಲ್ಲಿ ಕಟ್ಟಡ ಕೆಲಸದಲ್ಲಿ ತೊಡಗಿದ್ದಾಗ ಬಿದ್ದು ಮೃತಪಟ್ಟಿದ್ದಾರೆ. ಘಟನೆ ನಡೆದು ನಾಲ್ಕು ವರ್ಷ ಆಯಿತು. ನನಗೆ ನಾಲ್ವರು ಮಕ್ಕಳಿದ್ದಾರೆ. ಅವರ ಶಾಲೆಯ ಶುಲ್ಕ ಭರಿಸುವ ಶಕ್ತಿಯೂ ನನಗೆ ಇಲ್ಲ. ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ. ಇನ್ನೂ ಪರಿಹಾರ ಸಿಕ್ಕಿಲ್ಲ ಎಂದರು.

ಪರಿಹಾರದ ಬಗ್ಗೆ ನ್ಯಾಯಾಲಯ ನಿರ್ಧರಿಸಲಿದೆ. ನ್ಯಾಯಾಲಯದಲ್ಲಿ ವಾದಿಸಲು ಉಚಿತ ಕಾನೂನು ಸೇವೆ ಒದಗಿಸಲಾಗುವುದು. ಜತೆಗೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಪರಿಹಾರ ಪಡೆಯುವ ಬಗ್ಗೆ ಮಾರ್ಗದರ್ಶನ ಮಾಡಲಾಗುವುದು ಎಂದು ಡಿಸಿಪಿ ತಿಳಿಸಿದರು.

ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಕಚೇರಿ ಮುಂದೆ ಯೋಜನೆಗಳ ಮಾಹಿತಿ ಲಕ ಹಾಕಬೇಕು. ಯೋಜನೆಗಳ ಬಗ್ಗೆ ಪರಿಶಿಷ್ಟ ಜಾತಿಯ ವಿದ್ಯಾವಂತರಿಗೆ ಮಾಹಿತಿ ಇಲ್ಲ. ಮಾಧ್ಯಮಗಳಲ್ಲೂ ಜಾಹೀರಾತು ನೀಡಿ ಯೋಜನೆಗಳನ್ನು ಪ್ರಚುರ ಪಡಿಸಬೇಕು ಎಂದು ಮುಖಂಡರೊಬ್ಬರು ಮನವಿ ಮಾಡಿದರು.

ನಾನು ಯುವತಿಯೊಬ್ಬಳಿಗೆ 25 ಸಾವಿರ ರೂ. ಸಾಲ ದಾಖಲೆ ಪತ್ರದ ಮೂಲಕ ನೀಡಿದ್ದೇನೆ. ಆದರೆ ಆಕೆ ಕರಾರಿನಂತೆ ಸಾಲ ಮರುಪಾವತಿಸುತ್ತಿಲ್ಲ. ಈ ಬಗ್ಗೆ ಪಾಂಡೇಶ್ವರ ಪೊಲೀಸರಲ್ಲಿ ಕರಾರು ಪತ್ರ ತೋರಿಸಿದರೂ ಅವರು ಸಾಲ ವಸೂಲಿ ಮಾಡಿಕೊಡುತ್ತಿಲ್ಲ ಎಂದು ವಿಶ್ವನಾಥ್ ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ, ನೀವು ವೈಯಕ್ತಿಕವಾಗಿ ಮಾಡಿದ ಸಾಲಕ್ಕೆ ಪೊಲೀಸರು ಜವಾಬ್ದಾರಿ ಅಲ್ಲ. ಸಾಲ ವಸೂಲಿ ಮಾಡಿಕೊಡುವುದು ಅವರ ಕೆಲಸವೂ ಅಲ್ಲ. ಪೊಲೀಸರು ಕಳ್ಳರಾಟ ನಡೆಸುತ್ತಿಲ್ಲ. ನಿಮಗೆ ಕರಾರಿನಂತೆ ಸಾಲ ಮರುಪಾವತಿಸದೆ ವಂಚನೆಯಾಗಿದ್ದರೆ ದೂರು ನೀಡಬಹುದು. ಆಗ ಪೊಲೀಸರು ಕಾನೂನು ರೀತಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿದೆ. ಅದು ಬಿಟ್ಟು ಸಾಲ ವಸೂಲಿ ಮಾಡಿಕೊಡುವಂತೆ ಪೊಲೀಸ್ ಇಲಾಖೆಯಲ್ಲಿ ಹೇಳುವುದು ಸರಿಯಲ್ಲ ಎಂದು ಕಿವಿಮಾತಿತ್ತರು.

ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಪ್ರೀ ಪೇಯ್ಡಾ ಆಟೋ ಸೌಲಭ್ಯ ಬೆಳಗ್ಗೆ 8 ಗಂಟೆಯಿಂದ ಆರಂಭವಾಗುತ್ತದೆ. ಆದರೆ ಇದರಿಂದ ರೈಲು ಪ್ರಯಾಣಿಕರಿಗೆ ಹೆಚ್ಚಿನ ಪ್ರಯೋಜನವಾಗುತ್ತಿಲ್ಲ. ದೂರ ಸಂಚಾರದ ರೈಲುಗಳು ಮಧ್ಯರಾತ್ರಿ ಅಥವಾ ನಸುಕಿನ ಜಾವ ಆಗಮಿಸುತ್ತಿವೆ. ಆಗ ಪ್ರಯಾಣಿಕರಿಗೆ ಆಟೋ ಅಥವಾ ಬೇರೆ ಯಾವುದೇ ವಾಹನದ ಸೌಲಭ್ಯ ಇರುವುದಿಲ್ಲ. ಇದರ ಬದಲು ಬೆಳಗ್ಗೆ 6 ಗಂಟೆಯಿಂದಲೇ ಆಟೋ ಸೌಲಭ್ಯ ಸಿಗುವಂತಾಗಬೇಕು.

ಕೆಲವೊಮ್ಮೆ ಆಟೋಗಳು ದುಬಾರಿ ದರ ವಸೂಲಿ ಮಾಡುತ್ತಿವೆ ಎಂದು ದಲಿತ ಮುಖಂಡ ವಿಶ್ವನಾಥ ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ಡಿಸಿಪಿ ಹನುಮಂತರಾಯ, ಪ್ರೀ ಪೇಯ್ಡೆ ಆಟೋ ಕೇಂದ್ರದ ಗುತ್ತಿಗೆದಾರರಿಗೆ ಈ ಬಗ್ಗೆ ಸೂಚನೆ ನೀಡಲಾಗುವುದು. ಆರ್‌ಟಿಒ ನಿಗದಿಪಡಿಸಿದ ದರಕ್ಕಿಂತ ಅಧಿಕ ಬಾಡಿಗೆಯನ್ನು ವಸೂಲಿ ಮಾಡುವಂತಿಲ್ಲ. ಈ ಕುರಿತು ಆಟೋ ನಂಬರು ಸಮೇತ ದೂರು ನೀಡಬಹುದು ಅಥವಾ ಸಂಚಾರ ಆ್ಯಪ್‌ಗೆ ಅಹವಾಲು ಸಲ್ಲಿಸಬಹುದು ಎಂದು ತಿಳಿಸಿದರು.

ದಲಿತ ಮುಖಂಡ ಎಸ್.ಪಿ.ಆನಂದ, ಪ್ರೀತಂ, ವಿಶ್ವನಾಥ್ ಅಹವಾಲು ಮಂಡಿಸಿದರು. ಸಭೆಯಲ್ಲಿ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಪೊಲೀಸ್ ಅಧೀಕ್ಷಕ ಡಾ.ವೇದಮೂರ್ತಿ, ಮಂಗಳೂರು ನಗರ ಕೇಂದ್ರ ವಲಯದ ಸಹಾಯಕ ಪೊಲೀಸ್ ಆಯುಕ್ತ ಉದಯ ನಾಯಕ್, ಉತ್ತರ ವಲಯ ಸಹಾಯಕ ಪೊಲೀಸ್ ಆಯುಕ್ತ ರಾಜೇಂದ್ರ ಮತ್ತಿತರರು ಉಪಸ್ಥಿತರಿದ್ದರು.

 ಮಾಜಿ ಮೇಯರ್ ವಿರುದ್ಧ ಆರೋಪ: ಮಹಾನಗರ ಪಾಲಿಕೆ ಮಾಜಿ ಮೇಯರ್ ಕವಿತಾ ಸನಿಲ್ ಅವರು ಮೊಬೈಲ್‌ನಲ್ಲಿ ಕರೆ ಮಾಡಿ ಮಾನಹಾನಿಕರ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ನಾನು ಸಮಾಜ ಸೇವೆ ನಡೆಸುವುದನ್ನು ಸಹಿಸದೆ ಈ ರೀತಿ ತೊಂದರೆ ನೀಡುತ್ತಿದ್ದಾರೆ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಶಕ್ತಿನಗರ ನಿವಾಸಿ ಅಮಲ ಜ್ಯೋತಿ ಎಂಬಾಕೆ ದೂರಿದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಡಿಸಿಪಿ ಹನುಮಂತರಾಯ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News