×
Ad

ಇಂದ್ರಪ್ರೀತ್ ಛಡ್ಡಾ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು

Update: 2018-07-29 20:42 IST

ಅಮೃತಸರ(ಪಂಜಾಬ್),ಜು.29: ಚೀಫ್ ಖಾಲ್ಸಾ ದಿವಾನ್ ಚಾರಿಟೇಬಲ್ ಸೊಸೈಟಿಯ ಮಾಜಿ ಅಧ್ಯಕ್ಷ ಚರಣಜಿತ್ ಸಿಂಗ್ ಛಡ್ಡಾ ಅವರ ಪುತ್ರ ಇಂದ್ರಪ್ರೀತ್ ಛಡ್ಡಾ ಅವರ ಆತ್ಮಹತ್ಯೆ ಪ್ರಕರಣವು ಹೊಸ ತಿರುವು ಪಡೆದುಕೊಂಡಿದೆ. ಅವರ ಸಾವಿಗೆ ಕಾರಣವಾಗಿದ್ದ ಗುಂಡಿಗೂ ಅವರ ಪಿಸ್ತೂಲಿನಿಂದ ಹಾರಿಸಿದ ಗುಂಡಿಗೂ ತಾಳೆಯಾಗಿಲ್ಲ ಎಂದು ವಿಧಿವಿಜ್ಞಾನ ವರದಿಯು ಬೆಟ್ಟುಮಾಡಿದೆ.

 ಈ ವರ್ಷದ ಜ.3ರಂದು ಇಲ್ಲಿಯ ಶ್ರೀಗುರು ರಾಮದಾಸಜಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಯ ಡಿ.ಆರ್.ಎನ್‌ಕ್ಲೇವ್‌ನಲ್ಲಿರುವ ಕುಟುಂಬ ಸ್ನೇಹಿತನನ್ನು ಭೇಟಿಯಾಗಲೆಂದು ತೆರಳಿದ್ದ ಇಂದ್ರಪ್ರೀತ್ ತನ್ನ ಕಾರಿನಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಪ್ರಕರಣ ದಾಖಲಾಗಿತ್ತು.

ಇದಕ್ಕೂ ಮುನ್ನ ಚರಣಜಿತ್ ಮತ್ತು ಇಂದ್ರಪ್ರೀತ್ ಅವರ ವಿರುದ್ಧ ಕ್ರಿಮಿನಲ್ ಬೆದರಿಕೆ ದೂರನ್ನು ಪೊಲೀಸರು ದಾಖಲಿಸಿಕೊಂಡಿದ್ದರು.

ಮಹಿಳಾ ಪ್ರಾಂಶುಪಾಲರೋರ್ವರ ಜೊತೆಗೆ ಚರಣಜಿತ್ ಅವರ ಆಕ್ಷೇಪಾರ್ಹ ವೀಡಿಯೊ ತುಣುಕು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬಳಿಕ ಟ್ರಸ್ಟ್‌ನ ಸದಸ್ಯರು ಅವರನ್ನು ಅಧ್ಯಕ್ಷ ಹುದ್ದೆಯಿಂದ ವಜಾಗೊಳಿಸಿದ್ದರು.

ಆದರೆ ತನ್ನ ವರ್ಚಸ್ಸಿಗೆ ಮಸಿ ಬಳಿಯಲು ಈ ವೀಡಿಯೊವನ್ನು ಸೃಷ್ಟಿಸಲಾಗಿದೆ ಎಂದು ಚರಣಜಿತ್ ಹೇಳಿಕೊಂಡಿದ್ದರು.

ನ್ಯಾಯಾಲಯದಲ್ಲಿ ಛಡ್ಡಾ ಆತ್ಮಹತ್ಯೆ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ತಮ್ಮ ವರದಿಯನ್ನು ಸಲ್ಲಿಸಿದ್ದು,ಛಡ್ಡಾ ಅವರ ಸಾವಿಗೆ ಕಾರಣವಾಗಿದ್ದ ಗುಂಡು ಅವರ ರಿವಾಲ್ವರ್‌ನಿಂದ ಹಾರಿಸಲಾಗಿತ್ತೇ ಎನ್ನುವುದನ್ನು ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಅದರಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News