ಯುಎಇಯಿಂದ ಮೂರು ತಿಂಗಳ ವೀಸಾ ಅಮ್ನೆಸ್ಟಿ ಘೋಷಣೆ

Update: 2018-07-29 16:33 GMT

ದುಬೈ, ಜು.29: ಮೂರು ತಿಂಗಳ ಸಾಮಾನ್ಯ ವೀಸಾ ಅಮ್ನೆಸ್ಟಿ ಘೋಷಿಸುವ ಮೂಲಕ ಯುಎಇ ತನ್ನ ನೆಲದಲ್ಲಿ ವೀಸಾ ಅವಧಿ ಮುಗಿದ ನಂತರವೂ ಅಕ್ರಮವಾಗಿ ನೆಲೆಸಿರುವ ವಿದೇಶಿಗರು ನಿಟ್ಟುಸಿರು ಬಿಡುವಂತೆ ಮಾಡಿದೆ. ಆಗಸ್ಟ್ ಒಂದರಿಂದ ಆರಂಭವಾಗಲಿರುವ ವೀಸಾ ಆಮ್ನೆಸ್ಟಿ ಯುಎಇಯಲ್ಲಿ ಅಕ್ರಮವಾಗಿ ನೆಲೆಸಿರುವವರು ತಮ್ಮ ಮುಂದಿನ ದಾರಿ ಕಂಡುಕೊಳ್ಳಲು ನೆರವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. “ನಿಮ್ಮ ಸ್ಥಿತಿಯನ್ನು ಸರಿಪಡಿಸುವ ಮೂಲಕ ನಿಮ್ಮನ್ನು ರಕ್ಷಿಸಿಕೊಳ್ಳಿ” ಎಂಬ ಯೋಜನೆಯಡಿ ಘೋಷಿಸಲಾಗಿರುವ ವೀಸಾ ಅಮ್ನೆಸ್ಟಿಯಲ್ಲಿ ಅಕ್ರಮವಾಗಿ ನೆಲೆಸಿರುವವರು ಯಾವುದೇ ಶಿಕ್ಷೆಗೊಳಗಾಗದೆ ದೇಶವನ್ನು ತ್ಯಜಿಸುವ ಅಥವಾ ಅಗತ್ಯ ಶುಲ್ಕಗಳನ್ನು ಪಾವತಿಸಿ ಕಾನೂನಾತ್ಮಕವಾಗಿ ತಮ್ಮ ಇರುವಿಕೆಯನ್ನು ಅಧಿಕೃತಗೊಳಿಸುವ ಅವಕಾಶವನ್ನು ಸರಕಾರ ನೀಡಿದೆ.

 ವೀಸಾ ಸಡಿಲಿಕೆಯಿಂದ ಯುಎಇಯಲ್ಲಿ ಅವಧಿಗಿಂತ ಹೆಚ್ಚು ಕಾಲ ತಂಗಿರುವ ವಿದೇಶಿಗರ ಭಯವನ್ನು ತೊಡೆದುಹಾಕುವಲ್ಲಿ, ದುಬಾರಿ ಶುಲ್ಕ ಪಾವತಿ ಮಾಡಬೇಕಾದವರ ಹೊರೆಯನ್ನು ತಗ್ಗಿಸುವಲ್ಲಿ ನೆರವಾಗಲಿದೆ. ಜೊತೆಗೆ ಅಕ್ರಮ ನೆಲೆನಿಂತವರು ತಮ್ಮ ಇರುವಿಕೆಯನ್ನು ಕಾನೂನಾತ್ಮಕಗೊಳಿಸಲು ಅಥವಾ ಖುದ್ದಾಗಿ ದೇಶವನ್ನು ತೊರೆಯಲು ಪ್ರೇರಣೆ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಯೋಜನೆಯು ಅಕ್ಟೋಬರ್ 31ರಂದು ಕೊನೆಯಾಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News