ಆಧಾರ್ ಮಾಹಿತಿ ಮೂಲದಿಂದ ಶರ್ಮಾರ ಮಾಹಿತಿ ಹ್ಯಾಕ್ ಮಾಡಿಲ್ಲ: ಯುಐಡಿಎಐ ಸ್ಪಷ್ಟನೆ
Update: 2018-07-29 22:18 IST
ಹೊಸದಿಲ್ಲಿ, ಜು.29: ಟ್ವಿಟರ್‌ನಲ್ಲಿ ಪ್ರಕಟಿಸಲಾಗಿರುವ ಟ್ರಾಯ್ ಅಧ್ಯಕ್ಷ ಆರ್.ಎಸ್.ಶರ್ಮಾರ ವೈಯಕ್ತಿಕ ಮಾಹಿತಿಗಳನ್ನು ಆಧಾರ್ ಮಾಹಿತಿ ಮೂಲ ಅಥವಾ ಅದರ ಸರ್ವರ್‌ನಿಂದ ಪಡೆಯಲಾಗಿಲ್ಲ. ತಥಾಕಥಿತ ಹ್ಯಾಕ್ ಮಾಹಿತಿಯನ್ನು ಗೂಗಲ್ ಅಥವಾ ಇನ್ನಿತರ ಸೈಟ್‌ಗಳಲ್ಲಿ ‘ಸರ್ಚ್’ ಮಾಡುವ ಮೂಲಕ ಸುಲಭವಾಗಿ ಪಡೆಯಬಹುದು ಎಂದು ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ ) ಸ್ಪಷ್ಟಪಡಿಸಿದೆ.
ಶರ್ಮ ಕೆಲವು ದಶಕಗಳಿಂದ ಸರಕಾರಿ ಕರ್ತವ್ಯದಲ್ಲಿರುವ ಕಾರಣ ಅವರ ಕುರಿತ ಮಾಹಿತಿಗಳು ಗೂಗಲ್ ಹಾಗೂ ಇತರ ವೆಬ್‌ಸೈಟ್‌ಗಳಲ್ಲಿ ಆಧಾರ್ ಸಂಖ್ಯೆ ಇಲ್ಲದೆಯೇ ಸುಲಭವಾಗಿ ದೊರಕುತ್ತದೆ. ವಿಶ್ವದ ಅತ್ಯಂತ ಬೃಹತ್ ವಿಶಿಷ್ಟ ಗುರುತು ಯೋಜನೆಯ ವಿರುದ್ಧ ಕೆಲವರು ದುರುದ್ದೇಶಪೂರಿತವಾಗಿ ಅಪಪ್ರಚಾರ ನಡೆಸುವುದು ಖಂಡನೀಯವಾಗಿದೆ. ಆಧಾರ್ ಗುರುತುಪತ್ರದ ಮಾಹಿತಿ ಸುರಕ್ಷಿತವಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.