ಶೈಕ್ಷಣಿಕ ಸಂಸ್ಥೆಗಳಲ್ಲಿ ಅಂಗವಿಕಲರಿಗೆ ಸೂಕ್ತ ವ್ಯವಸ್ಥೆ
ಮುಂಬೈ, ಜು.29: ಶಾಲೆ, ಕಾಲೇಜುಗಳಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ಯಾವುದೇ ಅಡ್ಡಿಯಿಲ್ಲದೆ ಪ್ರವೇಶಾವಕಾಶ ನೀಡಲಾಗುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸುವಂತೆ ಮಹಾರಾಷ್ಟ್ರ ಸರಕಾರಕ್ಕೆ ಬಾಂಬೆ ಹೈಕೋರ್ಟ್ ಸೂಚಿಸಿದೆ.
ಅಲ್ಲದೆ ಅಂಗವಿಕಲ ವಿದ್ಯಾರ್ಥಿಗಳಿಗೆ ಒದಗಿಸಲಾಗಿರುವ ಸೌಕರ್ಯಗಳ ಕುರಿತು ಪಾಲನ ವರದಿಯನ್ನು ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆ ಹಾಗೂ ವಿಶ್ವವಿದ್ಯಾನಿಲಯಗಳಿಂದ ಪಡೆಯುವಂತೆ ಮಹಾರಾಷ್ಟ್ರ ಸರಕಾರ ಹಾಗೂ ಶಿಕ್ಷಣ ಇಲಾಖೆಯ ನಿರ್ದೇಶಕರಿಗೆ ನ್ಯಾಯಾಲಯ ತಿಳಿಸಿದೆ. ಪುಣೆಯ ನಿವಾಸಿ ಆಕಾಂಕ್ಷಾ ಕಾಳೆ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ನರೇಶ್ ಪಾಟೀಲ್ ಹಾಗೂ ಜಿ.ಎಸ್.ಕುಲಕರ್ಣಿ ಅವರಿದ್ದ ನ್ಯಾಯಪೀಠವು, ಶಾಲೆ, ಕಾಲೇಜುಗಳಲ್ಲಿ ಅಂಗವಿಕಲ ವಿದ್ಯಾರ್ಥಿಗಳಿಗೆ ಯಾವುದೇ ಅಡ್ಡಿಯಿಲ್ಲದೆ ಪ್ರವೇಶಾವಕಾಶ ನೀಡಲಾಗುತ್ತಿದೆಯೇ ಎಂಬುದರ ಬಗ್ಗೆ ರಾಜ್ಯ ಸರಕಾರ ನ್ಯಾಯಾಲಯಕ್ಕೆ ಮಾಹಿತಿ ನೀಡಬೇಕು ಎಂದು ಸೂಚಿಸಿದೆ.
ಅಂಗವಿಕಲ ವ್ಯಕ್ತಿಗಳ ಹಕ್ಕು ಕಾಯ್ದೆಯಡಿ ಕಡ್ಡಾಯಗೊಳಿಸಿರುವಂತೆ, ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳು ಹಾಗೂ ವಿವಿಗಳು ಯಾವುದೇ ಅಡ್ಡಿಯಿಲ್ಲದೆ ಅಂಗವಿಕಲರಿಗೆ ಪ್ರವೇಶಾವಕಾಶ ಒದಗಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಕಾಂಕ್ಷಾ ಅರ್ಜಿಯಲ್ಲಿ ಮನವಿ ಮಾಡಿಕೊಂಡಿದ್ದರು. ಗಾಲಿಕುರ್ಚಿಯ ನೆರವಿನಿಂದ ಸಂಚರಿಸಬೇಕಿರುವ ಆಕಾಂಕ್ಷಾ ಕಾಳೆ ತಾನು ಕಲಿಯುತ್ತಿದ್ದ ಪುಣೆಯ ಕಾಲೇಜಿನಲ್ಲಿ ಅಂಗವಿಕಲರಿಗೆ ಅನುಕೂಲಕರವಾದ ವ್ಯವಸ್ಥೆ ಇಲ್ಲದ ಕಾರಣ ತನಗೆ ಪರೀಕ್ಷೆ ಬರೆಯಲು ಸಾಧ್ಯವಾಗಿಲ್ಲ ಎಂದು ತಿಳಿಸಿ 2016ರಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಸಂದರ್ಭ ವಿದ್ಯಾರ್ಥಿನಿಗೆ ಸೂಕ್ತ ವ್ಯವಸ್ಥೆ ಮಾಡುವಂತೆ ನ್ಯಾಯಾಲಯ ಕಾಲೇಜಿಗೆ ಸೂಚಿಸಿತ್ತು. ಆದರೆ ನ್ಯಾಯಾಲಯದ ಸೂಚನೆಯ ಬಳಿಕವೂ ತನಗೆ ಕಾಲೇಜಿನಲ್ಲಿ ಸೂಕ್ತ ವ್ಯವಸ್ಥೆ ಮಾಡಿಲ್ಲ ಎಂದು ಆಕಾಂಕ್ಷಾ ಮತ್ತೊ್ಮೆು ಹೈಕೋರ್ಟ್ ಮೆಟ್ಟಿಲೇರಿದ್ದರು.