ಅಸ್ಸಾಮ್ ನಲ್ಲಿ 40 ಲಕ್ಷ ಜನರು ಅತಂತ್ರ: ಸರ್ವಪಕ್ಷ ಸಭೆಗೆ ಕಾಂಗ್ರೆಸ್ ಆಗ್ರಹ
ಹೊಸದಿಲ್ಲಿ, ಜು.30: ಅಸ್ಸಾಮಿಗಾಗಿ ಎನ್‌ಆರ್‌ಸಿಯ ಅಂತಿಮ ಕರಡು ಪಟ್ಟಿಯಿಂದ ಸುಮಾರು 40 ಲಕ್ಷ ಜನರು ಹೊರಗುಳಿದಿರುವ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್, ಈ ಬಗ್ಗೆ ಸರ್ವಪಕ್ಷ ಸಭೆಯೊಂದನ್ನು ಕರೆಯುವಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಗ್ರಹಿಸಿದೆ.
ವಾಸ್ತವದಲ್ಲಿ ಪಟ್ಟಿಯಿಂದ ಹೊರಗಿರುವವರಲ್ಲಿ ಹೆಚ್ಚಿನವರು ಪೌರತ್ವ ರುಜುವಾತಿಗಾಗಿ ನಿಗದಿಗೊಳಿಸಲಾಗಿದ್ದ 16 ದಾಖಲೆಗಳ ಪೈಕಿ ಒಂದಕ್ಕಿಂತ ಹೆಚ್ಚು ದಾಖಲೆಗಳನ್ನು ಹೊಂದಿದ್ದರು. ಸಮಸ್ಯೆಯನ್ನು ಬಗೆಹರಿಸಲು ತಾನು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಸರಕಾರವು ಪ್ರತಿಪಕ್ಷಗಳಿಗೆ ಮಾಹಿತಿ ನೀಡಬೇಕು ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಎಐಸಿಸಿಯ ಹಿರಿಯ ವಕ್ತಾರ ಆನಂದ ಶರ್ಮಾ ಅವರು ಹೇಳಿದರು.
ಗೃಹಸಚಿವ ರಾಜ್ ನಾಥ್ ಸಿಂಗ್ ಅವರು ಸೋಮವಾರ ಲೋಕಸಭೆಯಲ್ಲಿ ಈ ವಿಷಯದ ಕುರಿತು ನೀಡಿದ ಹೇಳಿಕೆಯು ತೃಪ್ತಿಕರವಾಗಿರಲಿಲ್ಲ ಎಂದ ಶರ್ಮಾ,ಇದು ರಾಜಕೀಯ ವಿಷಯವಲ್ಲ,ಮಾನವೀಯ ವಿಷಯವಾಗಿದೆ ಎಂದರು.
ಅಂತಿಮ ಕರಡಿನಲ್ಲಿ ಹೆಸರುಗಳಿಲ್ಲದವರನ್ನು ಸ್ಥಾನಬದ್ಧತೆ ಕೇಂದ್ರಗಳಲ್ಲಿ ಇರಿಸಲಾಗುವುದಿಲ್ಲ. ಜನರು ಯಾವುದೇ ಪ್ರಚೋದಕ ಹೇಳಿಕೆಗಳನ್ನು ನೀಡಬಾರದು ಎಂದು ನಾನು ಕೇಳಿಕೊಳ್ಳುತ್ತಿದ್ದೇನೆ.
-ಸರ್ಬಾನಂದ ಸೊನೊವಾಲ್,ಅಸ್ಸಾಂ ಮುಖ್ಯಮಂತ್ರಿ
ದೇಶದ ನಾಗರಿಕರು,ಅವರ ಮನೆಗಳು ಮತ್ತು ಆಸ್ತಿಗಳನ್ನು ಲೆಕ್ಕ ಹಾಕಲು ಎನ್‌ಆರ್‌ಸಿಯನ್ನು ಮೊದಲ ಬಾರಿಗೆ 1951ರಲ್ಲಿ ನಡೆಸಲಾಗಿತ್ತು. ಅಕ್ರಮ ಬಾಂಗ್ಲಾದೇಶಿ ವಲಸಿಗರ ವಿರುದ್ಧ ಆರು ವರ್ಷಗಳ ಪ್ರತಿಭಟನೆಯ ಬಳಿಕ 1985ರಲ್ಲಿ ಸಹಿ ಹಾಕಲಾಗಿದ್ದ ಅಸ್ಸಾಂ ಒಪ್ಪಂದದಂತೆ ಅಕ್ರಮ ವಲಸಿಗರನ್ನು ಗುರುತಿಸಲು ಎನ್‌ಆರ್‌ಸಿಯನ್ನು ಪರಿಷ್ಕರಿಸಲಾಗಿದೆ. ಮೊದಲ ಪರಿಷ್ಕೃತ ಕರಡನ್ನು 2017, ಡಿ.31-2018, ಜ.1ರ ರಾತ್ರಿ ಪ್ರಕಟಿಸಲಾಗಿದ್ದು,ಅದು 1.9 ಕೋಟಿ ಹೆಸರುಗಳನ್ನು ಒಳಗೊಂಡಿತ್ತು.
ಎನ್‌ಆರ್‌ಸಿ ಅರ್ಜಿ ಪ್ರಕ್ರಿಯೆಯನ್ನು ಮೇ 2015ರಲ್ಲಿ ಆರಂಭಿಸಲಾಗಿದ್ದು, ಅಸ್ಸಾಮಿನಾದ್ಯಂತ 68.27 ಲಕ್ಷ ಕುಟುಂಬಗಳಿಂದ 6.5 ಕೋಟಿ ದಾಖಲೆಗಳನ್ನು ಸ್ವೀಕರಿಸಲಾಗಿತ್ತು. ಎನ್‌ಆರ್‌ಸಿ ಪ್ರಕ್ರಿಯೆಗಾಗಿ 2013,ಸೆಪ್ಟೆಂಬರ್‌ನಿಂದ ಒಟ್ಟು 1,220 ಕೋ.ರೂ.ಗಳನ್ನು ವ್ಯಯಿಸಲಾಗಿದೆ.
ಎನ್‌ಆರ್‌ಸಿ ಕರಡು ಪಟ್ಟಿ ಸಂಪೂರ್ಣವಾಗಿ ನಿಷ್ಪಕ್ಷಪಾತವಾಗಿದೆ. ಪಟ್ಟಿಯಲ್ಲಿ ಹೆಸರುಗಳಿಲ್ಲದವರಿಗೆ ತಮ್ಮ ಭಾರತೀಯ ಪೌರತ್ವವನ್ನು ರುಜುವಾತುಗೊಳಿಸಲು ಅವಕಾಶ ನೀಡಲಾಗುವುದು. ಯಾರದೇ ವಿರುದ್ಧ ಬಲವಂತದ ಕ್ರಮವನ್ನು ಕೈಗೊಳ್ಳಲಾಗುವುದಿಲ್ಲ. ಹೀಗಾಗಿ ಅವರು ಆತಂಕ ಪಟ್ಟುಕೊಳ್ಳಬೇಕಿಲ್ಲ. ಅಂತಿಮ ಪಟ್ಟಿಯಲ್ಲಿ ಹೆಸರುಗಳಿಲ್ಲದವರೂ ವಿದೇಶಿಯರ ನ್ಯಾಯಾಧಿಕರಣಗಳನ್ನು ಸಂಪರ್ಕಿಸಬಹುದು.
*ರಾಜನಾಥ್ ಸಿಂಗ್,ಕೇಂದ್ರ ಗೃಹಸಚಿವ