×
Ad

ಗುರುಪ್ರಸಾದ್ ಭಟ್ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸೆರೆ

Update: 2018-07-30 22:30 IST

ಮಣಿಪಾಲ, ಜು.30: ಮಣಿಪಾಲ -ಪೆರಂಪಳ್ಳಿ ರಸ್ತೆಯ ಸೆವೆನ್ತ್ ಹೆವೆನ್ ಹೊಟೇಲ್ ಕಟ್ಟಡದಲ್ಲಿರುವ ಇಸ್ಪೀಟ್ ಕ್ಲಬ್ ನಲ್ಲಿ ಜು.29ರಂದು ನಡೆದ ಗುರು ಪ್ರಸಾದ್ ಭಟ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯನ್ನು ಪೊಲೀಸರು ಜು. 29ರಂದು ಮಧ್ಯರಾತ್ರಿ ವೇಳೆ ಉಪ್ಪೂರು ಕೊಳಲಗಿರಿಯಲ್ಲಿ ಬಂಧಿಸಿದ್ದಾರೆ.

ಬಂಧಿತನನ್ನು ಕೊಳಲಗಿರಿಯ ರಂಜಿತ್ ಪಿಂಟೋ (37) ಎಂದು ಗುರುತಿಸಲಾಗಿದೆ.

ಈತ ಈ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಸುಜಿತ್ ಪಿಂಟೋನ ಅಣ್ಣ. ಗುರುಪ್ರಸಾದ್‌ರನ್ನು ಕೊಲೆ ಮಾಡಿದ ಬಳಿಕ ಓಮ್ನಿ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದ ನಾಲ್ವರು ಆರೋಪಿಗಳ ಪೈಕಿ ಪ್ರದೀಪ್ ಪೂಜಾರಿ, ಸುಜಿತ್ ಪಿಂಟೋ ಹಾಗೂ ರಾಜೇಶ್ ಪೂಜಾರಿ ಎಂಬವರನ್ನು ಪೊಲೀಸರು ಕಂಡ್ಲೂರು  ಬಳಿ ಜು.29ರಂದು ಸಂಜೆ ವೇಳೆ ಬಂಧಿಸಿದ್ದರು. ಬಂಧಿತರಿಂದ ಕೃತ್ಯಕ್ಕೆ ಬಳಸಿದ ಓಮ್ನಿ ಕಾರು ಹಾಗೂ ಚೂರಿಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕೊಲೆ ಆರೋಪಿಗಳು ಹಾಗೂ ಗುರುಪ್ರಸಾದ್ ಭಟ್ ಮಧ್ಯೆ ಹಣಕಾಸಿನ ವ್ಯವಹಾರ ನಡೆಯುತ್ತಿದ್ದು, ಇದೇ ವಿಚಾರದಲ್ಲಿ ಮಾತನಾಡಲು ರಂಜಿತ್ ಪಿಂಟೋ ಜು.28ರಂದು ರಾತ್ರಿ ವೇಳೆ ಗುರುಪ್ರಸಾದ್ ಭಟ್‌ಗೆ ಮೊಬೈಲ್ ಕರೆ ಮಾಡಿದ್ದನು. ಈ ಸಂದರ್ಭ ಇಬ್ಬರ ಮಧ್ಯೆ ಮಾತಿನ ಚಕಮಕಿ ನಡೆದು ಗುರುಪ್ರಸಾದ್ ಭಟ್, ರಂಜಿತ್ ತಾಯಿಗೆ ಅವಾಚ್ಯ ಶಬ್ದಗಳಿಂದ ಬೈದ ಎನ್ನಲಾಗಿದೆ. ಇದೇ ಸಿಟ್ಟಿನಲ್ಲಿ ಸಹೋದರರಿಬ್ಬರು ಇತರ ಇಬ್ಬರೊಂದಿಗೆ ಸೇರಿ ಗುರುಪ್ರಸಾದ್ ಭಟ್‌ರನ್ನು ಜು.29ರಂದು ಕ್ಲಬ್‌ಗೆ ನುಗ್ಗಿ ಚೂರಿಯಿಂದ ಇರಿದು ಕೊಲೆ ಮಾಡಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ.

ರೌಡಿ ಸಹೋದರರು: ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ನಡೆದ ಹಲವು ಪ್ರಕರಣಗಳಲ್ಲಿ ಭಾಗಿಯಾಗಿರುವ ಸಹೋದರರಾದ ರಂಜಿತ್ ಪಿಂಟೋ ಹಾಗೂ ಸುಜಿತ್ ಪಿಂಟೋ ರೌಡಿ ಶೀಟರ್‌ಗಳಾಗಿದ್ದಾರೆ.

ಇವರಿಬ್ಬರು ಉಡುಪಿ ನಗರ ಹಾಗೂ ಮಲ್ಪೆ ಪೊಲೀಸ್ ಠಾಣೆಗಳಲ್ಲಿ ರೌಡಿ ಶೀಟರ್‌ಗಳಾಗಿದ್ದು, ರಂಜಿತ್ ಪಿಂಟೋ ಬ್ರಹ್ಮಾವರ ಠಾಣೆಯಲ್ಲೂ ರೌಡಿ ಶೀಟರ್ ಆಗಿದ್ದಾನೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ರಂಜಿತ್ ಪಿಂಟೋ ವಿರುದ್ಧ ಎರಡು ಮತ್ತು ಸುಜಿತ್ ಪಿಂಟೋ ವಿರುದ್ಧ ಮೂರು ಪ್ರಕರಣಗಳಿವೆ. ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ರಂಜಿತ್ ವಿರುದ್ಧ ಒಂದು ಪ್ರಕರಣ ಇದೆ. ಅದೇ ರೀತಿ ಉಡುಪಿ ನಗರ ಠಾಣೆಯಲ್ಲೂ ಇವರಿಬ್ಬರ ವಿರುದ್ಧ ಹಲವು ಪ್ರಕರಣಗಳಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ತಲೆನೋವಾಗಿದ್ದ ಇಬ್ಬರು ರೌಡಿ ಸಹೋದರರ ವಿರುದ್ಧ ಗೂಂಡಾ ಕಾಯಿದೆ ಜಾರಿ ಮಾಡುವಂತೆ ಶಿಫಾರಸ್ಸು ಮಾಡಲಾಗಿತ್ತು. ಆದರೆ ಅದು ನ್ಯಾಯಾಲಯದಲ್ಲಿ ತಿರಸ್ಕೃತ ಗೊಂಡಿತ್ತು ಎಂದು ತಿಳಿದು ಬಂದಿದೆ.

ಸುಜಿತ್ ಪಿಂಟೋ ಹಿರಿಯಡ್ಕ ಕೋತ್ನಕಟ್ಟೆ ಎಂಬಲ್ಲಿ 2017ರ ಡಿ.19ರಂದು ನಡೆದ ರೌಡಿ ವರ್ವಾಡಿ ಪ್ರವೀಣ್ ಕುಲಾಲ್ ಕೊಲೆ ಪ್ರಕರಣದ ಆರೋಪಿ ಯಾಗಿದ್ದಾನೆ. ಈ ಪ್ರಕರಣದಲ್ಲಿ ಜು.11ರಂದು ಬಂಧಿತನಾಗಿ ಜೈಲುಪಾಲಾಗಿದ್ದ ಈತ ಕೆಲ ಸಮಯದ ಹಿಂದೆ ಜಾಮೀನಿನಲ್ಲಿ ಬಿಡುಗಡೆಗೊಂಡು ಹೊರಗೆ ಬಂದಿದ್ದನು. ಈತ ಹಿರಿಯಡ್ಕ ಪೊಲೀಸ್ ಠಾಣೆಯಲ್ಲೂ ರೌಡಿ ಶೀಟರ್ ಆಗಿದ್ದಾನೆ ಎಂದು ಪೊಲೀಸ್ ಮೂಲ ತಿಳಿಸಿದೆ.

ನಾಲ್ವರು ಆರೋಪಿಗಳು ಪೊಲೀಸ್ ಕಸ್ಟಡಿಗೆ

ಬಂಧಿತ ನಾಲ್ವರು ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ, ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಇಂದು ಆದೇಶ ನೀಡಿದೆ.

ಪ್ರಕರಣದ ತನಿಖಾಧಿಕಾರಿಯಾಗಿರುವ ಮಣಿಪಾಲ ಪೊಲೀಸ್ ಇನ್‌ಸ್ಪೆಕ್ಟರ್ ಸುದರ್ಶನ್ ಸಂಜೆ ವೇಳೆ ನಾಲ್ವರು ಆರೋಪಿಗಳನ್ನು ಉಡುಪಿ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು. ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ಕುಮಾರ್ ಆರ್. ಎನ್. ಮೂಲಕ ತನಿಖಾಧಿಕಾರಿ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ನಾಲ್ವರನ್ನು ಆ. 2ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದರು.

‘ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲ ಆರೋಪಿಗಳನ್ನು ಈಗಾಗಲೇ ಬಂಧಿಸ ಲಾಗಿದ್ದು, ಇದರಲ್ಲಿ ಇತರರು ಭಾಗಿಯಾಗಿದ್ದಾರೆಯೇ ಎಂಬುದು ತನಿಖೆ ಯಿಂದ ತಿಳಿದು ಬರಬೇಕಾಗಿದೆ. ಹಣಕಾಸು ವ್ಯವಹಾರ ಮತ್ತು ಈ ಸಂಬಂಧ ತಾಯಿಗೆ ಬೈದ ಕಾರಣಕ್ಕೆ ಕೊಲೆ ನಡೆದಿದೆ. ಗುರುಪ್ರಸಾದ್ ಆರೋಪಿಗಳಿಗೆ ಎಷ್ಟು ಹಣ ಕೊಡಬೇಕಾಗಿದೆ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ’

- ಲಕ್ಷ್ಮಣ್ ನಿಂಬರ್ಗಿ, ಪೊಲೀಸ್ ಅಧೀಕ್ಷಕರು, ಉಡುಪಿ ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News