×
Ad

ಉಪ್ಪುಂದ ಬಳಿ ಬೆಂಕಿ ದುರಂತ: ಅಂಗಡಿಗಳು ಬೆಂಕಿಗೆ ಆಹುತಿ

Update: 2018-07-30 22:32 IST

ಬೈಂದೂರು, ಜು.30: ಉಪ್ಪುಂದ ಅಂಬಾಗಿಲು ಎಂಬಲ್ಲಿರುವ ವಾಣಿಜ್ಯ ಸಂಕಿರ್ಣದಲ್ಲಿ ಇಂದು ಬೆಳಗಿನ ಜಾವ ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ಮೂರು ಅಂಗಡಿಗಳಿಗೆ ಹಾನಿಯಾಗಿ ಸುಮಾರು 20ಲಕ್ಷ ರೂ. ನಷ್ಟ ಉಂಟಾಗಿ ರುವ ಬಗ್ಗೆ ವರದಿಯಾಗಿದೆ.

ಅಂಬಾಗಿಲಿನ ಕುಸುಮಾ ಶೆಡ್ತಿ ಎಂಬವರ ಬಿಎಂಎಸ್ ಕಟ್ಟಡದಲ್ಲಿರುವ ಸುರೇಶ್ ಪೂಜಾರಿ ಎಂಬವರ ಆನೆಗಣಪತಿ ಇಲೆಕ್ಟ್ರಿಕಲ್ಸ್ ಅಂಗಡಿಯಲ್ಲಿ ಬೆಳಗಿನ ಜಾವ 5 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯುಟ್‌ನಿಂದ ಬೆಂಕಿ ಕಾಣಿಸಿ ಕೊಂಡಿತ್ತೆನ್ನಲಾಗಿದೆ. ಇದರ ಕೆನ್ನಾಲಿಗೆ ಅದೇ ಕಟ್ಟಡದಲ್ಲಿರುವ ನವೀನ್ ಶೆಟ್ಟಿ ಎಂಬವರ ಓಂಕಾರ್ ಮೆಟಲ್ ಸ್ಟೋರ್ಸ್‌ ಹಾಗೂ ಗೋಪಾಲ ಭಂಡಾರಿ ಎಂಬ ವರ ಸೆಲೂನ್ ಅಂಗಡಿಗೂ ವಿಸ್ತರಿಸಿತು.

ಆರು ಗಂಟೆ ಸುಮಾರಿಗೆ ಸಮೀಪದ ತರಕಾರಿ ಅಂಗಡಿಯವರು ಹಾಗೂ ವಾಕಿಂಗ್ ಹೋಗುವವರು ಇದನ್ನು ನೋಡಿ ಸಂಬಂಧಪಟ್ಟವರ ಗಮನಕ್ಕೆ ತಂದ ರೆನ್ನಲಾಗಿದೆ. ಸ್ಥಳೀಯರು ಕೂಡಲೇ ಈ ಬಗ್ಗೆ ಬೈಂದೂರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಬೆಳಗ್ಗೆ 6:30ರ ಸುಮಾರಿಗೆ ಭಟ್ಕಳದ ಅಗ್ನಿ ಶಾಮಕ ದಳದ ಠಾಣೆಗೆ ತಿಳಿಸಿದರೆನ್ನಲಾಗಿದೆ.

ತಕ್ಷಣ ಒಂದು ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳೀಯರು ಹಾಗೂ ಪೊಲೀಸರ ಸಹಕಾರದೊಂದಿಗೆ ಸುಮಾರು ಮೂರು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಎರಡು ಟ್ಯಾಂಕ್ ನೀರನ್ನು ವ್ಯಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

ಈ ಬೆಂಕಿ ದುರಂತದಿಂದ ಇಲೆಕ್ಟ್ರಿಕಲ್ಸ್ ಅಂಗಡಿಯಲ್ಲಿದ್ದ ಇತ್ತೀಚಿಗಷ್ಟೇ ಬೆಂಗಳೂರಿನಿಂದ ತರಿಸಲಾದ ಅತ್ಯಂತ ದುಬಾರಿಯಾದ ಬೋಟಿಗೆ ಅಳವಡಿಸುವ 100 ವಯರಿಂಗ್ ಬಂಡಲ್‌ಗಳು, ಫ್ಯಾನ್, ಟ್ಯೂಬ್‌ಲೈಟ್, ಮಿಕ್ಸಿ, ಗ್ರೈಂಡರ್‌ಗಳು ಸಂಪೂರ್ಣ ಬೆಂಕಿಗೆ ಅಹುತಿಯಾಗಿವೆ. ಇದರಿಂದ ಸುಮಾರು 16 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಅದೇ ರೀತಿ ಮೆಟಲ್ ಅಂಗಡಿಯಲ್ಲಿದ್ದ ಸ್ಟೀಲ್, ಅಲ್ಯುಮಿನಿಯಂ, ತಾಮ್ರದ ಪಾತ್ರೆಗಳು ಸೇರಿದಂತೆ ಎಲ್ಲ ವಸ್ತುಗಳು ಸಂಪೂರ್ಣ ಸುಟ್ಟು ಹೋಗಿ ಸುಮಾರು ಮೂರು ಲಕ್ಷ ನಷ್ಟ ಉಂಟಾಗಿದೆ. ಸೆಲೂನ್ ಒಳಗಿನ ಮರದ ಸೀಲಿಂಗ್ ಹಾಗೂ ಗೋಡೆಗಳು ಬೆಂಕಿಯ ಶಾಖದಿಂದ ಸಂಪೂರ್ಣ ಕರಗಿ ಹೋಗಿ ಸುಮಾರು ಒಂದು ಲಕ್ಷ ನಷ್ಟವಾಗಿದೆ.

ಅಲ್ಲದೆ ಬಿಎಂಎಸ್ ಕಟ್ಟಡಕ್ಕೆ ಹಾಗೂ ಸುತ್ತಮತ್ತಲಿನ ಅಂಗಡಿಗಳಿಗೂ ಈ ದುರಂತದಿಂದ ಹಾನಿಯಾಗಿದೆ. ಈ ಬೆಂಕಿ ದುರಂತದಿಂದ ಒಟ್ಟು 20ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News