×
Ad

2 ಶತಕೋಟಿ ವರ್ಷಗಳ ಹಿಂದೆ ಮಾಯವಾಗಿದ್ದ ತಾರಾಪುಂಜದ ಸಾಕ್ಷ ಪತ್ತೆ

Update: 2018-07-30 22:50 IST

ಹೊಸದಿಲ್ಲಿ, ಜು.30: ಸುಮಾರು ಎರಡು ಶತಕೋಟಿ ವರ್ಷಗಳ ಹಿಂದೆಯೇ ಅಸ್ತಿತ್ವವನ್ನು ಕಳೆದುಕೊಂಡಿದ್ದ, ಆಂಡ್ರೊಮೆಡಾ ಮತ್ತು ಮಿಲ್ಕಿ ವೇ(ಕ್ಷೀರಪಥ) ತಾರಾಪುಂಜಗಳ ನಂತರದ ಅತಿ ದೊಡ್ಡ ತಾರಾಪುಂಜ ‘ಎಂ32ಪಿ’ಯ ನಿರ್ಣಾಯಕ ಸಾಕ್ಷಾಧಾರವನ್ನು ಖಭೌತ ಸಂಶೋಧಕರೂ ಆಗಿರುವ ಭಾರತೀಯ ಪಾದ್ರಿ ರಿಚರ್ಡ್ ಡಿಸೋಜಾ ಅವರು ಪತ್ತೆ ಹಚ್ಚಿದ್ದಾರೆ.

 ತನಗಿಂತ ಮುನ್ನ ಈ ಶೋಧದಲ್ಲಿ ತೊಡಗಿದ್ದ ಹಲವಾರು ಇತರರಂತೆ ತಾನೂ ಒಂದು ಹಂತದಲ್ಲಿ ಸಂಶೋಧನೆಯನ್ನು ಕೈಬಿಡಲು ಮುಂದಾಗಿದ್ದೆ ಎಂದು ಅವರು ಹೇಳಿದ್ದಾರೆ.

ಗೋವಾದ ಮಾಪುಸಾ ಮೂಲದ ಫಾ.ಡಿಸೋಜಾ ಅವರು ರೋಮನಲ್ಲಿರುವ ವ್ಯಾಟಿಕನ್ ನಿರೀಕ್ಷಣಾಲಯದಲ್ಲಿ ಖಗೋಳ ವಿಜ್ಞಾನಿಯಾಗಿದ್ದಾರೆ. ಅವರು ಪ್ರಸಕ್ತ ಅಮೆರಿಕದ ಮಿಚಿಗನ್ ವಿವಿಯ ಖಗೋಳಶಾಸ್ತ್ರ ವಿಭಾಗದಲ್ಲಿ ಪೋಸ್ಟ್-ಡಾಕ್ಟರಲ್ ಸಂಶೋಧನೆಯನ್ನು ನಡೆಸುತ್ತಿದ್ದಾರೆ.

ಮಹತ್ವದ ಸುಳಿವೊಂದು ದೊರೆಯುವವರೆಗೂ ತನ್ನ ತಂಡವು ನಿರಾಶೆಯನ್ನೇ ನಿರೀಕ್ಷಿಸಿತ್ತು ಎಂದು ಭಾರತದ ಸುದ್ದಿಸಂಸ್ಥೆ ಜೊತೆ ಅಮೆರಿಕದಿಂದ ಮಾತನಾಡುತ್ತಿದ್ದ ಡಿಸೋಜ ತಿಳಿಸಿದರು. ನಮಗಿಂತ ಮೊದಲು ಈ ಬಗ್ಗೆ ಸಂಶೋಧನೆಗಳನ್ನು ನಡೆಸುತ್ತಿದ್ದವರು ಅದನ್ನು ಕೈಬಿಟ್ಟು ಇತರ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದ್ದರು. ಆದರೆ ನಾವು ಪ್ರಯತ್ನಿಸುತ್ತಲೇ ಇದ್ದೆವು ಮತ್ತು ಅಂತಿಮವಾಗಿ ಸಾಧನೆ ಸಾಧ್ಯವಾಗಿದೆ. ನಮಗೆ ಗೊತ್ತಿದೆ ಎಂದು ನಾವು ತಿಳಿದುಕೊಂಡಿದ್ದನ್ನು ನಾವು ಮರೆಯಬೇಕು ಎನ್ನುವುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ ಎಂದ ಅವರು,ಆಂಡ್ರೊಮೆಡಾದಂತಹ ತಾರಾಪುಂಜವು ತನ್ನ ನೂರಾರು ಸಹತಾರಾಪುಂಜಗಳನ್ನು ನುಂಗಿದೆ ಎಂಬ ನಿರೀಕ್ಷಣೆಯು ಸಮಸ್ಯೆಯ ಭಾಗವಾಗಿತ್ತು. ಇದರಿಂದಾಗಿ ಅವುಗಳ ಪೈಕಿ ಒಂದಾದರೂ ತಾರಾಪುಂಜದ ಬಗ್ಗೆ ತಿಳಿದುಕೊಳ್ಳುವುದು ಕಠಿಣ ಎಂದು ಸಂಶೋಧಕರು ಭಾವಿಸಿದ್ದರು ಎಂದರು.

ಈ ಶೋಧ ಮತ್ತು ಅದಕ್ಕಾಗಿ ನಾವು ಅನುಸರಿಸಿದ್ದ ಪದ್ಧತಿಯು ಈಗ ಇತರ ಬೃಹತ್ ತಾರಾಪುಂಜಗಳು ನುಂಗಿರುವ ಸಣ್ಣ ತಾರಾಪುಂಜಗಳ ಶೋಧಕ್ಕೆ ಸುಗಮ ಮಾರ್ಗವನ್ನು ಕಲ್ಪಿಸಲಿದೆ ಎನ್ನುವುದು ಮಹತ್ವಪೂರ್ಣವಾಗಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News