×
Ad

ಕೋರಂ ಕೊರತೆ: ಉಚ್ಚಿಲ ಬಡಾ ಸಾಮಾನ್ಯ ಸಭೆ ರದ್ದು

Update: 2018-07-30 22:53 IST

ಪಡುಬಿದ್ರಿ, ಜು. 30: 14 ಬಿಜೆಪಿ ಬೆಂಬಲಿತ ಸದಸ್ಯರ ಮೂಲಕ ಆಡಳಿತ ನಡೆಸುತ್ತಿರುವ ಉಚ್ಚಿಲ ಬಡಾ ಗ್ರಾಮ ಪಂಚಾಯ್ತಿಯಲ್ಲಿ ಸೋಮವಾರ ನಡೆಯಬೇಕಿದ್ದ ಸಾಮಾನ್ಯ ಸಭೆಗೆ ಸ್ವಪಕ್ಷೀಯರೇ ಗೈರು ಹಾಜರಾಗುವ ಮೂಲಕ ಕೋರಂ ಕೊರತೆಯಿಂದ ಸಭೆ ರದ್ದಾದ ಘಟನೆ ನಡೆದಿದೆ.

ಬಡಾ ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷರ ಸಹಿತ ಬಿಜೆಪಿ ಬೆಂಬಲಿತ 14 ಹಾಗೂ ಕಾಂಗ್ರೆಸ್ ಬೆಂಬಲಿತ 7 ಜನ ಸದಸ್ಯರಿದ್ದಾರೆ. ಆದರೆ ಸೋಮವಾರ ನಡೆಯಬೇಕಿದ್ದ ಸಭೆಗೆ ಅಧ್ಯಕ್ಷೆ ನಾಗರತ್ನ ಎ ಕರ್ಕೇರ ಸಹಿತ ಕಾಂಗ್ರೆಸ್ ಬೆಂಬಲಿತ ಸದಸ್ಯರು ನಿಗದಿತ ಸಮಯಕ್ಕೆ ಹಾಜರಾಗಿದ್ದರು. ಹೆಚ್ಚಿನ ಸದಸ್ಯರು ಗೈರು ಹಾಜರಾಗುವ ಮೂಲಕ ಸಾಮಾನ್ಯ ಸಭೆಯನ್ನು ರದ್ದುಗೊಳಿಸಬೇಕಾಗಿ ಬಂದಿದೆ.

ಈ ಬಗ್ಗೆ ಪಿಡಿಒ ಕುಶಾಲಿನಿ ಮಾತನಾಡಿ, ಸೋಮವಾರ ಸಭೆ ನಡೆಯುವ ಬಗ್ಗೆ ಸದಸ್ಯರಿಗೆಲ್ಲ ಮಾಹಿತಿ ನೀಡಲಾಗಿದೆ. ಸದಸ್ಯರ ಗೈರಿನಿಂದ ಸಭೆ ರದ್ದು ಮಾಡಲಾಗಿದೆ. ಮುಂದೆ ಸಭೆ ನಡೆಸುವ ಬಗ್ಗೆ ದಿನಾಂಕ ನಿಗದಿ ಪಡಿಸಲಾಗುವುದು. ಆಗಲೂ ಕೋರಂ ಕೊರತೆಯಾದರೆ ಮತ್ತೆ ಇನ್ನೊಮ್ಮೆ ಸಭೆ ಕರೆಯಲಾಗುವುದು. ಮೂರು ಸಭೆಯೂ ರದ್ದಾದರೆ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಬಡಾ ಗ್ರಾಪಂನಲ್ಲಿ ಅಧ್ಯಕ್ಷೆ ಹಾಗೂ ಪಿಡಿಒ ನಡುವೆ ಹೊಂದಾಣಿಕೆ ಕೊರತೆಯಿಂದಾಗಿ ಸಮಸ್ಯೆಗಳಾಗುತ್ತಿದೆ ಎಂದು ಸದಸ್ಯರು ಹಾಗೂ ಗ್ರಾಮಸ್ಥರು ಹಲವು ಸಮಯದಿಂದ ದೂರುತ್ತಿದ್ದಾರೆ. ಅಧ್ಯಕ್ಷರ ಈ ಕಾರ್ಯವೈಖರಿಯಿಂದ ಇದೀಗ ಸ್ವಪಕ್ಷೀಯ ಸದಸ್ಯರೇ ಅವಿಶ್ವಾಸಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News