ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಮೋದಿ?

Update: 2018-07-31 14:52 GMT

ಲಾಹೋರ,ಜು.31: ಮುಂದಿನ ತಿಂಗಳು ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾರ್ಕ್ ರಾಷ್ಟ್ರಗಳ ನಾಯಕರನ್ನು ಆಹ್ವಾನಿಸುವ ಬಗ್ಗೆ ಅವರ ತೆಹ್ರಿಕ್-ಇ-ಇನ್ಸಾಫ್(ಪಿಟಿಐ) ಪರಿಶೀಲಿಸುತ್ತಿದೆ ಎಂದು ಪಕ್ಷದ ನಾಯಕರೋರ್ವರು ಮಂಗಳವಾರ ಇಲ್ಲಿ ತಿಳಿಸಿದರು.

ಜುಲೈ 25ರಂದು ನಡೆದಿದ್ದ ಪಾಕ್ ಚುನಾವಣೆಯಲ್ಲಿ ಪಿಟಿಐ ಏಕೈಕ ಅತಿದೊಡ್ಡ ಪಕ್ಷವಾಗಿ ಮೂಡಿ ಬಂದಿದೆಯಾದರೂ ಸ್ವಂತ ಬಲದಲ್ಲಿ ಸರಕಾರವನ್ನು ರಚಿಸಲು ಬಹುಮತದ ಕೊರತೆಯನ್ನೆದುರಿಸುತ್ತಿದೆ. ಆ.11ರಂದು ತಾನು ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುವುದಾಗಿ ಖಾನ್ ಸೋಮವಾರ ಹೇಳಿದ್ದಾರೆ.

ಮೋದಿಯವರು ಸೋಮವಾರ ಖಾನ್‌ಗೆ ಕರೆಮಾಡಿ ಅಭಿನಂದಿಸಿದ್ದಲ್ಲದೆ, ದ್ವಿಪಕ್ಷೀಯ ಸಂಬಂಧಗಳಲ್ಲಿ ನೂತನ ಅಧ್ಯಾಯವನ್ನು ಆರಂಭಿಸಲು ಉಭಯ ರಾಷ್ಟ್ರಗಳು ಶ್ರಮಿಸುತ್ತವೆ ಎಂಬ ಆಶಯವನ್ನು ವ್ಯಕ್ತಪಡಿಸಿದ್ದರು. ಮೋದಿ ಅವರು ಕರೆಯನ್ನು ಮಾಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿದ್ದ ಖಾನ್,ಮಾತುಕತೆಗಳ ಮೂಲಕ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ಹೇಳಿದ್ದರು.

ಪಕ್ಷವು ಶೀಘ್ರವೇ ವಿದೇಶಾಂಗ ಸಚಿವಾಲಯದೊಂದಿಗೆ ಸಮಾಲೋಚಿಸಿ ಸಾರ್ಕ್ ನಾಯಕರನ್ನು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸುವ ಬಗ್ಗೆ ನಿರ್ಧಾರವೊಂದನ್ನು ಕೈಗೊಳ್ಳಲಿದೆ ಎಂದು ಪಿಟಿಐ ವಕ್ತಾರ ಫವಾದ್ ಚೌಧರಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News