ಮುಖ್ಯಮಂತ್ರಿಗಳ ಉದ್ಯೋಗ ಸೃಜನ ಯೋಜನೆಗೆ ಅರ್ಜಿ ಆಹ್ವಾನ
ಉಡುಪಿ, ಜು.31: 2018-19ನೇ ಸಾಲಿನ ಮುಖ್ಯ ಮಂತ್ರಿಗಳ ಉದ್ಯೋಗ ಸೃಜನ ಯೋಜನೆ (ಸಿಎಂಇಜಿಪಿ)ಯಡಿ ಸ್ವ ಉದ್ಯೋಗ ಸ್ಥಾಪಿಸಲು ಆಸಕ್ತಿ ಇರುವ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ/ ಯುವತಿಯರಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಈ ಯೋಜನೆಯನ್ನು ಕರ್ನಾಟಕ ಸರಕಾರ ಗ್ರಾಮೀಣ ಪ್ರದೇಶದಲ್ಲಿ ಸ್ವಂತ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ಜಿಲ್ಲಾ ಕೈಗಾರಿಕಾ ಕೇಂದ್ರ ಹಾಗೂ ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ(ಕೆವಿಐಬಿ) ಗಳ ಮುಖಾಂತರ ಜಾರಿಗೊಳಿಸಲಾಗುತ್ತದೆ.
ಈ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ ಯುವತಿಯರಿಗೆ ಗರಿಷ್ಟ ಯೋಜನಾ ವೆಚ್ಚ 10 ಲಕ್ಷ ರೂ. ಬ್ಯಾಂಕ್ ಸಾಲ ದೊಂದಿಗೆ ಹೊಸ ಕೈಗಾರಿಕೆ ಉತ್ಪಾದನೆ ಚಟುವಟಿಕೆ ಹಾಗೂ ಆಯ್ದ ಕೆಲವು ಸೇವಾ ಘಟಕ ಸ್ಥಾಪಿಸುವವರಿಗೆ ಅವಕಾಶವಿದ್ದು, ಯೋಜನಾ ವೆಚ್ಚದ ಶೇ.25 ರಿಂದ 35ರವರೆಗೆ ಸಹಾಯಧನ ನೀಡಲಾಗುವುದು.
ಅಭ್ಯರ್ಥಿ ಕನಿಷ್ಠ 8ನೇ ತರಗತಿ ಉತ್ತೀರ್ಣರಾಗಿರಬೇಕು. ಅರ್ಜಿದಾರರು ಕನಿಷ್ಟ 21 ವರ್ಷ ವಯೋಮಾನದವರಾಗಿದ್ದು, ಸಾಮಾನ್ಯ ವರ್ಗದವರಿಗೆ ಗರಿಷ್ಠ 35 ವರ್ಷ ಹಾಗೂ ವಿಶೇಷ ವರ್ಗದವರಿಗೆ (ಮಹಿಳೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಜಾತಿ ಪಂಗಡ/ ಹಿಂದುಳಿದ ವರ್ಗ/ ಅಲ್ಪಸಂಖ್ಯಾತರು/ ಮಾಜಿ ಯೋಧರು/ ಅಂಗವಿಕಲರು) ಗರಿಷ್ಠ 45 ವರ್ಷ.
ಅಭ್ಯರ್ಥಿಗಳು ಅರ್ಜಿಯನ್ನು ಜಂಟಿ ನಿದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಉಡುಪಿ ಇಲ್ಲಿಂದ ಪಡೆದು, ಭರ್ತಿ ಮಾಡಿ ನಿಗದಿತ ದಾಖಲೆಗಳೊಂದಿಗೆ ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ ಕೈಗಾರಿಕಾ ಪ್ರದೇಶ, ಮಣಿಪಾಲ, ಉಡುಪಿ (ದೂರವಾಣಿ:0820-2575650/2575655), ಹಾಗೂ ಜಿಲ್ಲಾ ಅಧಿಕಾರಿಗಳು, ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ, ಮಣಿಪಾಲ, ಉಡುಪಿ (0820-2574855) ಇಲ್ಲಿಗೆ ಆ.31ರೊಳಗೆ ತಲುಪುವಂತೆ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಕೈಗಾರಿಕಾ ಕೇಂದ್ರ, ಶಿವಳ್ಳಿ ಕೈಗಾರಿಕಾ ಪ್ರದೇಶ, ಮಣಿಪಾಲ, ತಾಲೂಕು ಕೈಗಾರಿಕಾ ವಿಸ್ತರಣಾಧಿಕಾರಿ ಕಚೇರಿ ಅಥವಾ ಕೆವಿಐಬಿ, ಮಣಿಪಾಲ ಇವರನ್ನು ಸಂಪರ್ಕಿಸುವಂತೆ ಉಡುಪಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿದೇಶರ್ಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.