×
Ad

ಆ. 1: ಶಿರೂರು ಸೊತ್ತುಗಳು ಸೋದೆ ಮಠಕ್ಕೆ ಹಸ್ತಾಂತರ

Update: 2018-07-31 22:25 IST

ಉಡುಪಿ, ಜು.31: ಶಿರೂರು ಮಠಾಧೀಶ ಶ್ರೀಲಕ್ಷ್ಮೀವರ ತೀರ್ಥ ಸ್ವಾಮೀಜಿ ಸಾವಿನ ಬಳಿಕ ಪೊಲೀಸ್ ವಶದಲ್ಲಿದ್ದ ಶಿರೂರು ಮಠಕ್ಕೆ ಸಂಬಂಧಿಸಿದ ಸೊತ್ತು ಗಳನ್ನು ಪೊಲೀಸರು ಶಿರೂರು ಮಠದ ದ್ವಂದ್ವ ಮಠವಾಗಿರುವ ಸೋದೆ ಮಠಕ್ಕೆ ಒಪ್ಪಿಸಲಿದ್ದಾರೆ.

 ಜು.19ರಂದು ಸ್ವಾಮೀಜಿ ಮೃತಪಟ್ಟ ನಂತರ ತನಿಖೆಯ ಹಿನ್ನೆಲೆಯಲ್ಲಿ ಉಡುಪಿ ಹಾಗೂ ಹಿರಿಯಡ್ಕ ಸಮೀಪದ ಶಿರೂರು ಮೂಲ ಮಠವನ್ನು ಪೊಲೀಸರು ಸುಪರ್ದಿಗೆ ಪಡೆದು ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಿದ್ದರು. ಅಲ್ಲದೆ ಮಠದ ಚರಾಸ್ತಿಗಳು ಕೂಡ ಪೊಲೀಸರ ವಶದಲ್ಲಿದ್ದವು. ಮಠದಲ್ಲಿರುವ ವಿಗ್ರಹ, ಪೂಜಾ ಸಾಮಗ್ರಿ, ಚಿನ್ನ, ಬೆಳ್ಳಿ ಆಭರಣ ಸಹಿತ ವಿವಿಧ ಸೊತ್ತುಗಳನ್ನು ಪೊಲೀಸರು ಸೋದೆ ಮಠಕ್ಕೆ ಹಸ್ತಾಂತರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಸಂಬಂಧ ಪೊಲೀಸ್ ಅಧಿಕಾರಿಗಳ ತಂಡ ಹಾಗೂ ಸೋದೆ ಸ್ವಾಮೀಜಿ ಶ್ರೀವಿಶ್ವವಲ್ಲಭ ತೀರ್ಥ ಸ್ವಾಮೀಜಿ ಇಂದು ಉಡುಪಿಯ ಶಿರೂರು ಮಠಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಶಿರೂರು ಸ್ವಾಮೀಜಿ ವಿಧಿವಶರಾಗಿ ಇಂದಿಗೆ 13 ದಿನಗಳಾಗಿದ್ದು, ಈ ದಿನ ಮೂಲಮಠದಲ್ಲಿರುವ ಅವರ ವೃಂದವನಾಸ್ಥಳದಲ್ಲಿ ನಡೆಯಬೇಕಾಗಿದ್ದ ಗುರು ಆರಾಧನೆಯನ್ನು ಪೊಲೀಸ್ ತನಿಖೆಯ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ. ವೃಂದಾವನಸ್ಥ ಸ್ಥಳದಲ್ಲಿ ದೀಪ ಹಚ್ಚಿ ತೀರ್ಥ ಹಾಕಲಾಗಿದೆ ಎಂದು ಮಠದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News