ಲಂಚ ಪ್ರಕರಣ: ಸಾಕೇತ್ ಠಾಣಾಧಿಕಾರಿ ಬಂಧನ

Update: 2018-07-31 17:47 GMT

ಹೊಸದಿಲ್ಲಿ, ಜು.31: ಯುನಿಟೆಕ್ ಲಿಮಿಟೆಡ್ ಎಂಬ ಸಂಸ್ಥೆಗೆ ಸಂಬಂಧಿಸಿದ, ನ್ಯಾಯಾಲಯಕ್ಕೆ ವಹಿಸಿದ ಪ್ರಕರಣಗಳನ್ನು ನಿರ್ವಹಿಸಲು 2 ಲಕ್ಷ ರೂ. ಲಂಚ ವಿನಿಮಯ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿ ಸಾಕೇತ್‌ನ ಠಾಣಾಧಿಕಾರಿ ಹಾಗೂ ವಕೀಲರನ್ನು ಸಿಬಿಐ ಬಂಧಿಸಿದೆ.

ಅಲ್ಲದೆ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಯುನಿಟೆಕ್ ಲಿಮಿಟೆಡ್ ಸಂಸ್ಥೆಯ ಸ್ಥಾಪಕ ರಮೇಶ್‌ಚಂದ್ರನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯುನಿಟೆಕ್ ಲಿಮಿಟೆಡ್ ಸಂಸ್ಥೆಗೆ ಸಂಬಂಧಿಸಿದ 47 ಪ್ರಕರಣಗಳನ್ನು ಸಾಕೇತ್ ನ್ಯಾಯಾಲಯವು ಸಾಕೇತ್ ಪೊಲೀಸ್ ಠಾಣೆಗೆ ವಹಿಸಿಕೊಟ್ಟಿದೆ.ಈ ಪ್ರಕರಣಗಳನ್ನು ‘ಸೂಕ್ತವಾಗಿ ನಿರ್ವಹಿಸಲು’ ಸಾಕೇತ್ ಠಾಣಾಧಿಕಾರಿಗೆ ನಿಯಮಿತವಾಗಿ ಲಂಚ ನೀಡಲಾಗುತ್ತಿತ್ತು ಎಂದು ಆರೋಪಿಸಲಾಗಿದೆ.

ಈ ಕುರಿತ ಮಾಹಿತಿಯ ಮೇರೆಗೆ ದಾಳಿ ನಡೆಸಿದ್ದ ಸಿಬಿಐ, ವಕೀಲ ನೀರಜ್ ವಾಲಿಯಾ ಅವರು ಠಾಣಾಧಿಕಾರಿ ನೀರಜ್ ಕುಮಾರ್‌ಗೆ 2 ಲಕ್ಷ ಲಂಚ ಹಸ್ತಾಂತರಿಸುತ್ತಿದ್ದಾಗಲೇ ಬಂಧಿಸಿದೆ ಎಂದು ಹೇಳಲಾಗಿದೆ. ಇಬ್ಬರನ್ನೂ ಬಂಧಿಸಿ, ಯುನಿಟೆಕ್ ಸಂಸ್ಥೆ ಹಾಗೂ ಎಂಟು ಮಂದಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ ಸಂಸ್ಥೆಯ ಸ್ಥಾಪಕ ರಮೇಶ್‌ಚಂದ್ರ, ಅಜಯ್ ಚಂದ್ರ, ಉಪ್ಮಾ ಚಂದ್ರ, ಸೀಮಾ , ಪ್ರದೀಪ್ ಕುಮಾರ್ ಹಾಗೂ ಪೊಲೀಸ್ ಅಧಿಕಾರಿ ಸಂಜಯ್ ಶರ್ಮರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News