×
Ad

ಆಳಸಮುದ್ರ ಮೀನುಗಾರಿಕೆ ಆರಂಭ: 70 ಬೋಟುಗಳ ಶುಭಾರಂಭ

Update: 2018-08-01 20:02 IST

ಮಂಗಳೂರು, ಆ.1: ಕಳೆದ ಎರಡು ತಿಂಗಳಿನಿಂದ ಆಳ ಸಮುದ್ರ ಮೀನುಗಾರಿಕೆಗೆ ಜು.31ಕ್ಕೆ ನಿಷೇಧ ಹೊರಡಿಸಿದ್ದ ಆದೇಶ ಹಿಂದಕ್ಕೆ ಪಡೆಯಲಾಗಿದ್ದು, ಬುಧವಾರ ಮೀನುಗಾರಿಕೆ ಆರಂಭಗೊಂಡಿದೆ. ಸುಮಾರು 70ಕ್ಕೂ ಹೆಚ್ಚು ಟ್ರಾಲ್ ಬೋಟ್‌ಗಳು ಆಳಸಮುದ್ರ ಮೀನುಗಾರಿಕೆಗೆ ತೆರಳಿವೆ.

ಮಂಜುಗಡ್ಡೆ ತುಂಬಲು ಜಾಗವಿಲ್ಲ: ಬೋಟುಗಳಲ್ಲಿ ಸಾಕಷ್ಟು ಡೀಸೆಲ್, ಮಂಜುಗಡ್ಡೆ, ನೀರು, ಆಹಾರ ಸಾಮಗ್ರಿಯನ್ನು ತುಂಬಿಕೊಂಡು ಹೋಗುವ ಅಗತ್ಯವಿದೆ. ಆದರೆ ದಕ್ಕೆಯಲ್ಲಿ ಬೋಟುಗಳ ನಿಲುಗಡೆಗೆ ಸ್ಥಳಾವಕಾಶ ಕೊರತೆಯಿದೆ. ಮೊದಲ ದಿನ ಕಡಿಮೆ ಪ್ರಮಾಣದಲ್ಲಿ ಬೋಟುಗಳು ಸಮುದ್ರಕ್ಕೆ ತೆರಳಿವೆ. ಸ್ಥಳಾವಕಾಶದ ಕೊರತೆಯಿಂದ ಮೀನುಗಾರರು ಪರದಾಟ ಹೇಳ ತೀರದಾಗಿದೆ.

ಒಂದೇ ಸಮಯದಲ್ಲಿ ದಕ್ಕೆಯಲ್ಲಿ ಎಲ್ಲ ಬೋಟುಗಳನ್ನು ನಿಲ್ಲಿಸಿ ಮಂಜುಗಡ್ಡೆ, ಡೀಸೆಲ್‌ನ್ನು ತುಂಬಲು ಅವಕಾಶವಿಲ್ಲ. ದಕ್ಕೆಯಲ್ಲಿ ಕೇವಲ ನಾಲ್ಕು ಡೀಸೆಲ್ ಪಂಪ್‌ಗಳಿವೆ. ಸರದಿ ಸಾಲಿನಲ್ಲಿ ಎಲ್ಲ ಬೋಟುಗಳು ಡೀಸೆಲ್‌ನ್ನು ತುಂಬಬೇಕಾಗಿದೆ. ಜೊತೆಗೆ ಮಂಜುಗಡ್ಡೆ, ಆಹಾರ, ಸಾಮಗ್ರಿಯನ್ನು ಲೋಡ್ ಮಾಡಬೇಕು.

ಎದುರಿನ ಬೋಟುಗಳು ಸಾಮಗ್ರಿ ತುಂಬಿಕೊಂಡು ಹಿಂದೆ ಹೋಗಲು ಅವಕಾಶ ಇಲ್ಲದಂತಾಗಿದೆ. ಜೊತೆಗೆ ಹಿಂದೆ ಇರುವ ಬೋಟುಗಳು ಎದುರು ಬರಲು ಹರಸಾಹಸ ಪಡುವಂತಾಗಿದೆ. ರಸ್ತೆಯಲ್ಲಿರುವ ಟ್ರಾಫಿಕ್‌ಗಿಂತ ದಕ್ಕೆಯಲ್ಲಿರುವ ಬೋಟುಗಳ ಟ್ರಾಫಿಕ್ ಹೆಚ್ಚಾಗಿದೆ. ಸುಮಾರು ಎಂಟರಿಂದ ಒಂಬತ್ತು ಸಾಲುಗಳಲ್ಲಿ ಬೋಟುಗಳು ನಿಂತಿವೆ.

ದಕ್ಕೆಯಲ್ಲಿ ಬೋಟುಗಳನ್ನು ನಿಲ್ಲಿಸಲು ಸ್ಥಳಾವಕಾಶದ ಕೊರತೆಯಿದೆ. ಒಂದೇ ಸಮಯದಲ್ಲಿ ಎಲ್ಲ ಬೋಟುಗಳಿಗೆ ಡೀಸೆಲ್, ಮಂಜುಗಡ್ಡೆ, ಆಹಾರ ಸಾಮಗ್ರಿ ತುಂಬಲಾಗಲ್ಲ. ದಕ್ಕೆಯಲ್ಲಿರುವ ಬೋಟುಗಳು ತೆರಳಿದ ನಂತರ ಉಳಿದ ಬೋಟುಗಳು ಮೀನುಗಾರಿಕೆಗೆ ಹೊರಡಲಿವೆ.

- ಮೋಹನ್ ಬೆಂಗ್ರೆ, ಪರ್ಸಿನ್ ಮೀನುಗಾರರ ಸಂಘದ ಅಧ್ಯಕ್ಷ

ಆಳಸಮುದ್ರ ಮೀನುಗಾರಿಕೆಗೆ ಇದ್ದ ನಿಷೇಧವನ್ನು ಮಂಗಳವಾರ ಹಿಂದಕ್ಕೆ ಪಡೆಯಲಾಗಿದೆ. ಬುಧವಾರ ಮೀನುಗಾರಿಕೆ ಆರಂಭವಾಗಿದ್ದು, ಸುಮಾರು 70ಕ್ಕೂ ಹೆಚ್ಚು ಟ್ರಾಲ್ ಬೋಟುಗಳು ಮೀನುಗಾರಿಕೆಗೆ ತೆರಳಿವೆ.

- ಮಹೇಶ್‌ಕುಮಾರ್, ಉಪನಿರ್ದೇಶಕ, ಮೀನುಗಾರಿಕೆ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News