ಈತನ ಮೇಲಿದೆ 6 ಕೋ. ರೂ. ಮೌಲ್ಯದ ಚಿನ್ನ !

Update: 2018-08-01 14:36 GMT

ಹೊಸದಿಲ್ಲಿ, ಆ.1: ಚಿನ್ನಾಭರಣ ಧರಿಸಿಕೊಂಡು ಕನ್ವರ್ ಯಾತ್ರೆ ನಡೆಸುವ ಮೂಲಕ ‘ಗೋಲ್ಡನ್ ಬಾಬಾ’ ಎಂದೇ ಹೆಸರಾಗಿ ಎಲ್ಲರ ಗಮನ ಸೆಳೆದಿರುವ ಬಾಬಾ ಅಲಿಯಾಸ್ ಸುಧೀರ್ ಮಕ್ಕರ್ ಈ ಬಾರಿ 6 ಕೋಟಿ ರೂ. ವೌಲ್ಯದ ಆಭರಣ ಧರಿಸಿ ಯಾತ್ರೆ ನಡೆಸಲು ಸಜ್ಜಾಗಿದ್ದಾರೆ.

 ಈ ವರ್ಷ ತನ್ನ 25ನೇ ಕನ್ವರ್ ಯಾತ್ರೆಗೆ ಹೊರಟಿರುವ ಸುಧೀರ್ ಮಕ್ಕ್ಕರ್ ಸುಮಾರು 20 ಕಿ.ಗ್ರಾಂ.ನಷ್ಟು ತೂಕದ ಆಭರಣ ಧರಿಸಲಿದ್ದಾರೆ. ವರ್ಷದಿಂದ ವರ್ಷಕ್ಕೆ ಈತ ಧರಿಸುವ ಚಿನ್ನಾಭರಣದ ತೂಕ ಮತ್ತು ಮೌಲ್ಯ ಹೆಚ್ಚುತ್ತಿದೆ. 2016ರಲ್ಲಿ 12 ಕಿ.ಗ್ರಾಂ. ಚಿನ್ನ ಧರಿಸಿ ಯಾತ್ರೆಗೆ ತೆರಳಿದ್ದರೆ ಕಳೆದ ವರ್ಷ 14.5 ಕಿ.ಗ್ರಾಂ ಬಂಗಾರದ ಒಡವೆ ಧರಿಸಿದ್ದರು. ಈ ಬಾರಿ ತಾನು ಹೆಚ್ಚು ಚಿನ್ನಾಭರಣ ಧರಿಸುತ್ತಿಲ್ಲ. ಯಾಕೆಂದರೆ ಅದರ ಭಾರದಿಂದ ತನ್ನ ಕಣ್ಣಿನ ದೃಷ್ಟಿಗೆ ಹಾಗೂ ನರಗಳಿಗೆ ಸಮಸ್ಯೆಯಾಗುತ್ತದೆ.

2018ರಲ್ಲಿ ರಜತ ಮಹೋತ್ಸವ ಆಚರಣೆಯೊಂದಿಗೆ ಯಾತ್ರೆಯನ್ನು ಮುಗಿಸುತ್ತೇನೆ ಎಂದು ಕಳೆದ ವರ್ಷ ಈತ ಘೋಷಿಸಿದ್ದ. ಹರಿದ್ವಾರದಿಂದ ದಿಲ್ಲಿಯವರೆಗಿನ 200 ಕಿ.ಮೀ. ದೂರದ ಯಾತ್ರೆಯಲ್ಲಿ ಹಲವು ವಾಹನಗಳ ಸಾಲಿನಲ್ಲಿ ಸುಧೀರ್ ಮಕ್ಕರ್ ಪ್ರಯಾಣಿಸುತ್ತಾರೆ. ಚಿನ್ನಾಭರಣದ ಮೋಹದ ಜೊತೆಗೆ ಇನ್ನಿತರ ಐಷಾರಾಮಿ ವಸ್ತುಗಳ ಮೋಹವೂ ಇವರಿಗಿದೆ. 27 ಲಕ್ಷ ರೂ.ವೌಲ್ಯದ ರೋಲೆಕ್ಸ್ ವಾಚ್‌ನ ಜೊತೆಗೆ ಒಂದು ಬಿಎಂಡಬ್ಲೂ ಕಾರು, 3 ಫಾರ್ಚ್ಯೂನರ್ ಕಾರುಗಳು, ಎರಡು ಆಡಿ, ಎರಡು ಇನ್ನೋವ ಕಾರುಗಳ ಸಂಗ್ರಹ ಇವರಲ್ಲಿದೆ. ಇದರ ಜೊತೆಗೆ ಕೆಲವೊಮ್ಮೆ ಹರಿದ್ವಾರಕ್ಕೆ ಯಾತ್ರೆ ತೆರಳುವಾಗ ಹಮ್ಮರ್, ಜಾಗ್ವಾರ್, ಲ್ಯಾಂಡ್ ರೋವರ್‌ನಂತಹ ಅದ್ದೂರಿ ಕಾರನ್ನು ಬಾಡಿಗೆಗೆ ಪಡೆಯುತ್ತಾರೆ. ದಿಲ್ಲಿಯ ಬಡ ಕುಟುಂಬದಲ್ಲಿ ಜನಿಸಿದ್ದ ಮಕ್ಕ್ಕರ್ ಬಳಿಕ ಹರಿದ್ವಾರಕ್ಕೆ ತೆರಳಿ ಅಲ್ಲಿ ಬೀದಿ ಬದಿ ಬಟ್ಟೆ ಮಾರಿ ಜೀವನ ಸಾಗಿಸುತ್ತಿದ್ದರು. ಬಳಿಕ ದಿಲ್ಲಿಯ ಗಾಂಧಿನಗರ ಮಾರ್ಕೆಟ್ ಪ್ರದೇಶದಲ್ಲಿ ಬಟ್ಟೆ ಅಂಗಡಿಯ ಜೊತೆಗೆ ಭೂ ವ್ಯವಹಾರ ನಡೆಸುತ್ತಿದ್ದರು. ಆಧ್ಯಾತ್ಮಿಕದತ್ತ ಆಕರ್ಷಿತರಾದರೂ ಚಿನ್ನಾಭರಣ ಸಹಿತ ಅದ್ದೂರಿಯು ಜೀವನ ಶೈಲಿಗೆ ಹೆಸರಾಗಿದ್ದು ಘಾಝಿಯಾಬಾದ್‌ನ ಇಂದಿರಾಪುರಂನಲ್ಲಿ ವೈಭವೋಪೇತ ಬಂಗಲೆಯನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News