ಸೋನಿಯಾ, ಅಹ್ಮದ್ ಪಟೇಲ್ ಅವರನ್ನು ಸಿಲುಕಿಸಲು ಒತ್ತಾಯಿಸಲಾಗಿತ್ತು: ಮಧ್ಯವರ್ತಿ ಮೈಕಲ್

Update: 2018-08-01 14:36 GMT

ಹೊಸದಿಲ್ಲಿ, ಆ. 1: 3,600 ಕೋಟಿ ರೂ. ಮೊತ್ತ ಅಗಸ್ಟಾ ವೆಸ್ಟ್  ಲ್ಯಾಂಡ್ ಹಗರಣದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಹೆಸರು ಉಲ್ಲೇಖಿಸಿದರೆ, ತನಗೆ ಕ್ಲೀನ್ ಚಿಟ್ ನೀಡುವ ಭರವಸೆಯನ್ನು ಭಾರತೀಯ ತನಿಖೆಗಾರರು ನೀಡಿದ್ದರು ಎಂದು ಅಗಸ್ಟಾ ವೆಸ್ಟ್  ಲ್ಯಾಂಡ್ ಒಪ್ಪಂದದ ಮಧ್ಯವರ್ತಿ ಹಾಗೂ ಬ್ರಿಟಿಶ್ ಶಸ್ತ್ರಾಸ್ತ್ರ ವ್ಯಾಪಾರಿ ಕ್ರಿಶ್ಚಿಯನ್ ಮೈಕಲ್ ಹೇಳಿದ್ದಾರೆ. ದುಬೈಯಲ್ಲಿ ಜಾಮೀನು ದೊರಕಿದ ಒಂದು ದಿನದ ಬಳಿಕ ಕ್ರಿಶ್ಚಿಯನ್ ಮೈಕಲ್ ಈ ಹೇಳಿಕೆ ನೀಡಿದ್ದಾರೆ. ಕಳೆದ 49 ದಿನಗಳ ಕಾಲ ಬಂಧನದಲ್ಲಿದ್ದ ಮೈಕಲ್ ಅವರ ಪ್ರಕರಣದ ವಿಚಾರಣೆಯನ್ನು ದುಬೈ ನ್ಯಾಯಾಲಯ ಸೋಮವಾರ ನಡೆಸಿತು ಹಾಗೂ ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿತು.

  ಬ್ರಿಟಿಶ್ ಪ್ರಜೆ ಆಗಿರುವ ಮೈಕಲ್ ಅಗಸ್ಟಾ ವೆಸ್ಟ್  ಲ್ಯಾಂಡ್‌ನ 60 ದಶಲಕ್ಷ ಯುರೋ ಲಂಚವನ್ನು ನಿರ್ವಹಿಸಿದ್ದಾನೆ ಹಾಗೂ ರವಾನಿಸಿದ್ದಾನೆ ಎಂದು ಶಂಕಿಸಲಾಗಿದೆ. 1997 ಹಾಗೂ 2013ರ ನಡುವೆ ಅವರು 300 ಭಾರಿ ಭಾರತಕ್ಕೆ ಆಗಮಿಸಿದ್ದಾರೆ ಎಂದು ತನಿಖೆಗಾರರು ಹೇಳಿದ್ದಾರೆ. ಅವರು ಲಂಚವನ್ನು ಇರಿಸಲು ಹಾಗೂ ವರ್ಗಾಯಿಸಲು ದುಬೈ ಮೂಲದ ಸಂಸ್ಥೆ ಗ್ಲೋಬಲ್ ಸರ್ವೀಸ್ ಎಫ್‌ಝಡ್‌ಇಯನ್ನು ಬಳಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯದ ಕಡತಗಳು ಹೇಳುತ್ತವೆ. ಆದರೆ, ತಾನು ಯಾವುದೇ ಅಪರಾಧ ಎಸಗಿಲ್ಲ ಎಂದು ಮೈಕಲ್ ಹೇಳಿದ್ದಾರೆ. ಅಗಸ್ಟಾ ವೆಸ್ಟ್  ಲ್ಯಾಂಡ್ ಹಗರಣದಲ್ಲಿ ಸೋನಿಯಾ ಗಾಂಧಿ ಅವರ ಹೆಸರು ಉಲ್ಲೇಖಿಸುವಂತೆ ತನ್ನ ಮೇಲೆ ಒತ್ತಡ ಹೇರಲಾಗಿತ್ತು ಎಂಬ ತನ್ನ ಆರೋಪ ಸಾಬೀತುಪಡಿಸಲು ಹೋಟೆಲ್‌ನ ಭದ್ರತಾ ದೃಶ್ಯಾವಳಿ, ಕನಿಷ್ಠ 6 ಸಾಕ್ಷಿಗಳನ್ನು ಹಾಜರುಪಡಿಸುವುದಾಗಿ ಮೈಕಲ್ ಬುಧವಾರ ಭಾರತದೊಂದಿಗಿನ ವಿಶೇಷ ಸಂದರ್ಶನದಲ್ಲಿ ಹೇಳಿದ್ದಾರೆ.

 “ಮೇಯಲ್ಲಿ ನನ್ನನ್ನು ಭೇಟಿಯಾಗಲು ನಿಯೋಗವೊಂದು ಬಂದಿತ್ತು. ನಾನು ಭೇಟಿಯಾಗಲು ಒಪ್ಪಿಕೊಂಡೆ. ಗ್ರಾಂಡ್ ಹಯಾತ್ ಹೊಟೇಲ್ ಒಂದು ಹಾಗೂ ದುಬೈಯ ಪ್ಯಾಲೇಸ್ ಹೊಟೇಲ್‌ನಲ್ಲಿ ಎರಡು ಸಬೆ ನಡೆಯಿತು. ಸುಮಾರು 20 ಪುಟಗಳಿದ್ದ ದಾಖಲೆಯನ್ನು ಅವರು ನನಗೆ ನೀಡಿದರು ಹಾಗೂ ಅದಕ್ಕೆ ಸಹಿ ಹಾಕುವಂತೆ ಹೇಳಿದರು” ಎಂದು ಅವರು ಪ್ರತಿಪಾದಿಸಿದ್ದಾರೆ. “ಆ ದಾಖಲೆಯ ಎರಡು ಮೂರು ಪುಟಗಳನ್ನು ಓದಿದ ಬಳಿಕ ಇದು ಸರಿ ಇಲ್ಲ. ಆದುದರಿಂದ ತಾನು ಸಹಿ ಹಾಕಲಾರೆ ಎಂದು ಹೇಳಿದ್ದೆ. ಅದರಲ್ಲಿ ಸಂಭವಿಸದೇ ಇರುವ ವಿಷಯವನ್ನು ಹೇಳಲಾಗಿತ್ತು” ಎಂದು ಮೈಕಲ್ ಹೇಳಿದ್ದಾರೆ. “ಕೊನೆಯ ಸಭೆ ರಾತ್ರಿ 11 ಗಂಟೆಗೆ ನಡೆಯಿತು. ನಾವು ಎಲ್ಲ ಕಡತಗಳನ್ನು ನೋಡಿದೆವು. ಅದರಲ್ಲಿ ಏನೂ ಇರಲಿಲ್ಲ. ಅನಂತರ ಅವರು ನಾನು ಬರೆಯದ, ನಾನು ಹೇಳದ ಬಜೆಟ್ ಹಾಳೆಯೊಂದನ್ನು ತೆಗೆದರು. ಅದನ್ನು ಬರೆಯುವಾಗ ನಾನು ಅಲ್ಲಿ ಇರಲಿಲ್ಲ. ಹಾಳೆಯ ಕೊನೆಯಲ್ಲಿ ಸೋನಿಯಾ ಗಾಂಧಿ, ಅವರ ಕುಟುಂಬದವರು ಹಾಗೂ ಅಹ್ಮದ್ ಪಟೇಲ್ ಅವರ ಹೆಸರನ್ನು ಉಲ್ಲೇಖಿಸಲು ಅವರು ಬಯಸಿದ್ದರು. ಇದಕ್ಕೆ ಒಪ್ಪಿದರೆ ತನಗೆ ಕ್ಲೀನ್ ಚಿಟ್ ನೀಡಲಾಗುವುದು ಎಂದು ಅವರು ಹೇಳಿದ್ದರು” ಎಂದು ಮೈಕಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News