ಪಡುಬಿದ್ರೆ ಬೀಚ್‌ಗೆ ಕೇಂದ್ರದ ‘ಬ್ಲೂ ಫ್ಲ್ಯಾಗ್ ಸರ್ಟಿಫಿಕೇಟ್’ ಮಾನ್ಯತೆ

Update: 2018-08-01 15:03 GMT

ಉಡುಪಿ, ಆ.1: ಕೇಂದ್ರ ಪರಿಸರ ಮಂತ್ರಾಲಯದ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ ಜಿಲ್ಲೆಯ ಪಡುಬಿದ್ರೆ ಬೀಚ್‌ಗೆ ‘ಬ್ಲೂ ಫ್ಲ್ಯಾಗ್ ಸರ್ಟಿಫಿಕೇಟ್’ ಮಾನ್ಯತೆಯನ್ನು ಅಧಿಕೃತವಾಗಿ ಘೋಷಿಸಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹಾಗೂ ಉಡುಪಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಯೋಜನೆಯಡಿಯಲ್ಲಿ ದೇಶದ 13 ಸಮುದ್ರ ತೀರದ ರಾಜ್ಯಗಳಲ್ಲಿ ಸೊಸೈಟಿ ಫಾರ್ ಇಂಟಗ್ರೇಟೆಡ್ ಕೋಸ್ಟಲ್ ಮ್ಯಾನೇಜ್‌ಮೆಂಟ್ (ಎಸ್‌ಐಸಿಒಎಂ), ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯ (ಎಂಒಇಎಫ್) ಹಾಗೂ ಬೀಚ್ ಮ್ಯಾನೇಜ್‌ಮೆಂಟ್ ಸರ್ವಿಸಸ್ (ಬಿಎಂಎಸ್) ಇವರ ಸಹಯೋಗದೊಂದಿಗೆ ಸ್ವಚ್ಛ ಹಾಗೂ ಉತ್ತಮ ಪರಿಸರ ಮತ್ತು ನೀರಿನ ಗುಣಮಟ್ಟ ಹೊಂದಿರುವ ಕಡಲ ತೀರಗಳನ್ನು ನಿರ್ಮಿಸಲಾಗುವುದು. ಸ್ವಚ್ಛ ಕಡಲ ತೀರವು ಆರೋಗ್ಯಕರ ಪ್ರವಾಸೋದ್ಯಮ ಹಾಗೂ ಉತ್ತಮ ಆರ್ಥಿಕತೆಯ ಸೂಚ್ಯಾಂಕವನ್ನು ನಿರ್ಧರಿಸುತ್ತದೆ ಎಂದವರು ವಿವರಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಸುಸ್ಥಿರ ಪ್ರವಾಸೋದ್ಯಮ ಮತ್ತು ಆರೋಗ್ಯಕರ ಕರಾವಳಿ ತೀರದ ಬೀಚ್‌ಗಳನ್ನು ‘ಬ್ಲೂ ಫ್ಲ್ಯಾಗ್ ಸರ್ಟಿಫಿಕೇಷನ್’ ಯೋಜನೆಯಡಿ ಅಳವಡಿಸಲು ಭಾರತ ಸರಕಾರ ನಿರ್ಧರಿಸಿದ್ದು, ಅದರಂತೆ ಇಲ್ಲಿ ಅಂತಾ ರಾಷ್ಟ್ರೀಯ ಗುಣಮಟ್ಟದ ಯೋಜನೆಯನ್ನು ರೂಪಿಸಲಾಗುವುದು.

ಸುಸ್ಥಿರ ಪ್ರವಾಸೋದ್ಯಮಕ್ಕೆ ಉತ್ತೇಜನ: ಯೋಜನೆಯಡಿಯಲ್ಲಿ ಆಯ್ಕೆಗೊಂಡಿರುವ ಪಡುಬಿದ್ರೆ ಬೀಚ್ ವ್ಯಾಪ್ತಿಯಲ್ಲಿ ಸುಸ್ಥಿರ ಪ್ರವಾಸೋದ್ಯಮಕ್ಕೆ ಉತ್ತೇಜನ, ಸ್ವಚ್ಛತಾ ಪರಿಸರ ನಿರ್ವಹಣೆ, ಪರಿಸರ ಶಿಕ್ಷಣ ಹಾಗೂ ಸ್ಥಳೀಯರಿಗೆ ಅರಿವು ಮೂಡಿಸುವುದು, ಸ್ನಾನದ ನೀರಿನ ಗುಣಮಟ್ಟ ಮತ್ತು ಸುರಕ್ಷತಾ ಕ್ರಮಗಳು, ಭದ್ರತಾ ವ್ಯವಸ್ಥೆಯ ನಿರ್ವಹಣೆ ಹಾಗೂ ಕಡಲ ತೀರದ ನಿರ್ವಹಣೆ ಯನ್ನು ಕ್ರಮಬದ್ಧವಾಗಿ ಮಾಡಲು ಪ್ರೇರೇಪಿಸುವುದು ಬೀಚ್ ಮ್ಯಾನೇಜ್‌ಮೆಂಟ್ ಸರ್ವಿಸಸ್‌ನ ಮುಖ್ಯ ಉದ್ದೇಶವಾಗಿರುತ್ತದೆ.

ಇವುಗಳೊಂದಿಗೆ ಕಡಲ ತೀರದ ಜೀವ ವೈವಿಧ್ಯತೆ ಬಗೆ ಕಾಳಜಿ, ಪರಿಸರ ರಕ್ಷಣೆ, ಪರಿಸರ ಸಂರಕ್ಷಣೆ, ಪರಿಣಾಮಕಾರಿ ಘನತ್ಯಾಜ್ಯ ನಿರ್ವಹಣೆ, ಸೂಕ್ತ ಮೂಲಭೂತ ವ್ಯವಸ್ಥೆ ಹಾಗೂ ಸ್ಥಳೀಯ ಆಹಾರ ಪದ್ಧತಿ ಮತ್ತು ಜೀವನಶೈಲಿ ಯನ್ನು ಪ್ರವಾಸಿಗರಿಗೆ ಪರಿಚಯಿಸುವುದು ಯೋಜನೆಯ ಮುಖ್ಯ ಉದ್ದೇಶವಾ ಗಿರುತ್ತದೆ.

ಸ್ಥಳೀಯರಿಗೆ ಪರಿಸರ ಶಿಕ್ಷಣ, ಪರಿಸರದ ಬಗ್ಗೆ ಅರಿವು ಕಾರ್ಯಕ್ರಮಗಳು, ಸ್ಥಳೀಯ ಸಹಭಾಗಿತ್ವದಾರರಿಗೆ ತರಬೇತಿ, ಹೋಂಸ್ಟೇ ಬಗ್ಗೆ ಅಭಿಯಾನ ಗಳೊಂದಿಗೆ ಸುಸ್ಥಿರ ಪ್ರವಾಸೋದ್ಯಮವನ್ನು ಉತ್ತೇಜಿಸಲಾಗುವುದು.

ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಸ್ಥಳೀಯರ ಸಹಕಾರ ದೊಂದಿಗೆ ಈ ಯೋಜನೆಯನ್ನು ಅನುಷ್ಠಾನಗೊಳಿಸಲಾಗುತಿದ್ದು, ಪಡುಬಿದ್ರೆ ಬೀಚ್ 2018ರ ವರ್ಷಾಂತ್ಯಕ್ಕೆ ಫೌಂಡೇಷನ್ ಫಾರ್ ಎನ್ವಿರಾನ್‌ಮೆಂಟಲ್ ಎಜ್ಯುಕೇಷನ್ (ಎಫ್‌ಇಇ) ಜಾಗತಿಕ ಪ್ರಧಾನ ಕಚೇರಿ ಡೆನ್ಮಾರ್ಕ್‌ನ ಸಹಯೋಗ ದೊಂದಿಗೆ ‘ಬ್ಲೂ ಪ್ಲಾಗ್ ಸರ್ಟಿಫಿಕೇಷನ್’ ಗುಣಮಟ್ಟದ ಬೀಚ್ ಅನ್ನು ನಿರೀಕ್ಷಿಸುವ ಪ್ರವಾಸಿಗರು ತಮ್ಮ ರಜಾ ದಿನಗಳನ್ನು ಕಳೆಯಲು ಯೋಜನೆ ರೂಪಿಸಲು ಅನುಕೂಲವಾಗಲಿದೆ.

ಒಂದು ಅಂದಾಜಿನಂತೆ ಬ್ಲು ಫ್ಲಾಗ್ ಸರ್ಟಿಫಿಕೇಷನ್ ಬೀಚ್‌ಗಳು ವಾರ್ಷಿಕವಾಗಿ 100 ಕೋಟಿ ರೂ.ಗಳಿಗೂ ಅಧಿಕ ವಹಿವಾಟು ನಡೆಸುವುದಾಗಿ ತಿಳಿದು ಬಂದಿದೆ. ಹೀಗಾಗಿ ಉಡುಪಿ ಜಿಲ್ಲೆಯ ಪಡುಬಿದ್ರೆ ಬೀಚ್ ಜಾಗತಿಕ ಮಟ್ಟದಲ್ಲಿ ತನ್ನ ಹೆಸರನ್ನು ಛಾಪಿಸಿ ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಕಸಲು ಸಹಾಯಕವಾಗಲಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಹಾಗೂ ಅನಿತಾ ಭಾಸ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಡುಬಿದ್ರೆ ಬೀಚ್ ಎಂಡ್‌ಪಾಯಿಂಟ್

ಕೇಂದ್ರ ಪರಿಸರ ಇಲಾಖೆಯಿಂದ ಅನುಮೋದನೆಗೊಂಡಿರುವ ಅಂತಾರಾಷ್ಟ್ರೀಯ ಮಟ್ಟದ ಈ ಯೋಜನೆಯಿಂದ ಪಡುಬಿದ್ರೆ ಬೀಚ್‌ನ ಎಂಡ್‌ಪಾಯಿಂಟ್ ಪ್ರದೇಶದ (ನದಿ ಸಮುದ್ರ ಸೇರುವ ಅಳಿವೆ ಪ್ರದೇಶ) ಸುಮಾರು 500ಮೀ. ವ್ಯಾಪ್ತಿಯಲ್ಲಿ ಪರಿಸರ ಸ್ನೇಹಿ ವಸ್ತುಗಳನ್ನು ಬಳಕೆ ಮಾಡಿ ಜೈವಿಕ ಶೌಚಾಲಯಗಳು, ಬಟ್ಟೆ ಬದಲಾವಣೆ ಕೊಠಡಿ ಹಾಗೂ ಸ್ನಾನದ ಕೊಠಡಿ, ಫಲಕಗಳು, ಜಾಗಿಂಗ್ ಟ್ರಾಕ್ ಮತ್ತು ಹೊರಾಂಗಣ ಜಿಮ್, ಮಕ್ಕಳ ಮನರಂಜನಾ ಚಟುವಟಿಕೆಗಳಿಗೆ ಅವಕಾಶ ಒದಗಿಸಲಾಗುವುದು.

ಅಲ್ಲದೇ ಪ್ಲಾಸ್ಟಿಕ್ ಬಾಟಲ್ ಬಳಕೆ ತಪ್ಪಿಸಲು ಶುದ್ಧ ಕುಡಿಯುವ ನೀರಿನ ಘಟಕ, ಘನತ್ಯಾಜ್ಯ ಸಂಯೋಜನೆ ಮತ್ತು ಮರುಬಳಕೆ, ಸಾಕಷ್ಟು ಕಸದ ಬುಟ್ಟಿಗಳು, ಆಸನಗಳ ಅಳವಡಿಕೆ, ವಿಕಲಚೇತನರಿಗೆ ವೀಲ್‌ಚೇರ್ ವ್ಯವಸ್ಥೆ, ಸೌರಶಕ್ತಿ ಬಳಕೆ, ಛತ್ರಿಗಳೊಂದಿಗೆ ಲಾಂಜ್ನರ್ ಕುರ್ಚಿಗಳ ಅಳವಡಿಕೆ, ದಿನದ 24 ಗಂಟೆ ಸಿಸಿಟಿವಿ ಕಣ್ಗಾವಲು, ವೀಕ್ಷಣೆ ಗೋಪುರಗಳನ್ನು 500ಮೀ.ನ ಯೋಜನಾ ಪ್ರದೇಶದಲ್ಲಿ ನಿರ್ಮಿಸಲಾಗುತ್ತದೆ ಎಂದು ಅನಿತಾ ಭಾಸ್ಕರ್ ತಿಳಿಸಿದ್ದಾರೆ.

ಯೋಜನೆಯ ಒಟ್ಟು ಮೊತ್ತ ಎಂಟು ಕೋಟಿ ರೂ.ಗಳಾಗಿದ್ದು, ಕೇಂದ್ರ ಸರಕಾರದ ಟೆಂಡರ್‌ನಲ್ಲಿ ಆಯ್ಕೆಯಾಗಿರುವ ಗುರುಗ್ರಾಮದ ಎ ಟು ಝಡ್ ಇನ್‌ಫ್ರಾ ಸರ್ವಿಸಸ್ ಲಿ. ಇಲ್ಲಿಗೆ ಬೇಕಾದ ಎಲ್ಲಾ ಸೌಕರ್ಯಗಳನ್ನು ನಿರ್ಮಿಸಲಿದೆ. ಇಲ್ಲಿ ಮೂಲಭೂತ ಸೌಕರ್ಯಗಳ ನಿರ್ಮಾಣದ ಜೊತೆಗೆ ಬೀಚ್‌ನ ಸ್ವಚ್ಛತೆಯೂ ಸೇರಿದಂತೆ ಮುಂದಿನ ಎರಡು ವರ್ಷಗಳ ಕಾಲ ಬೀಚ್‌ನ ಸಂಪೂರ್ಣ ನಿರ್ವಹಣೆಯ ಜವಾಬ್ದಾರಿಯೂ ಈ ಸಂಸ್ಥೆಯ ಮೇಲಿದೆ.

ಬ್ಲೂ ಫ್ಲ್ಯಾಗ್ ಮಾನ್ಯತೆ

ಸುಂದರ ಬೀಚ್‌ಗೆ ಅಂತಾರಾಷ್ಟ್ರೀಯ ಮಟ್ಟದ ಬ್ಲೂ ಫ್ಲಾಗ್ ಮಾನ್ಯತೆ ದೊರೆಯುವುದರಿಂದ ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿಗರು ಪಡುಬಿದ್ರೆ ಬೀಚ್‌ಗೆ ಬರಲು ಸಾಧ್ಯವಾಗಲಿದೆ. ಮಾಜಿ ಸಚಿವ ಪ್ರಮೋದ್ ಮಧ್ವರಾಜ್  ಮಲ್ಪೆ ಸಮೀಪದ ಪಡುಕೆರೆ ಬೀಚ್‌ಗೆ ಇಂಥ ಮಾನ್ಯತೆ ದೊರಕಿಸುವ ಪ್ರಯತ್ನ ನಡೆಸಿದ್ದರು.

ಬ್ಲೂ ಫ್ಲ್ಯಾಗ್ ಮಾನ್ಯತೆ, ನಿರ್ದಿಷ್ಠ ಅಂತಾರಾಷ್ಟ್ರೀಯ ಗುಣಮಟ್ಟದ ಬೀಚ್ ಗಳಿಗೆ ಫೌಂಡೇಷನ್ ಫಾರ್ ಎನ್ವಿರಾನ್‌ಮೆಂಟಲ್ ಎಜ್ಯುಕೇಷನ್ (ಎಫ್‌ಇಇ) ಎಂಬ ಸಂಸ್ಥೆ ನೀಡುವ ಮಾನ್ಯತೆಯಾಗಿದೆ. ಯುರೋಪ್, ಆಫ್ರಿಕ, ಒಷಿಯಾನ, ಏಷ್ಯ, ಉತ್ತರ ಅಮೆರಿಕ, ದಕ್ಷಿಣ ಅಮೆರಿಕಗಳ 60 ದೇಶಗಳು ಇದರ ಸದಸ್ಯತ್ವ ಹೊಂದಿವೆ. ಇಂಥ ಬೀಚ್‌ಗಳಿಗೆ ವಿದೇಶಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News