ವೇಶ್ಯಾವಾಟಿಕೆಗಳಿಂದ ಬಾಲಕಿಯರ ರಕ್ಷಣೆ

Update: 2018-08-01 15:16 GMT

 ಹೈದರಾಬಾದ್,ಆ.1: ತೆಲಂಗಾಣದ ಯಾದಾದ್ರಿ ಭುವನಗಿರಿ ಜಿಲ್ಲೆಯ ಯಾದಗಿರಿಗುಟ್ಟಾ ಪಟ್ಟಣದಲ್ಲಿಯ ವಿವಿಧ ವೇಶ್ಯಾವಾಟಿಕೆಗಳ ಮೇಲೆ ದಾಳಿ ನಡೆಸಿದ ಪೊಲೀಸರು ಅತ್ಯಂತ ಅಮಾನವೀಯ ಸೆಕ್ಸ್ ಜಾಲವನ್ನು ಭೇದಿಸಿದ್ದಾರೆ. 11 ಅಪ್ರಾಪ್ತ ವಯಸ್ಕ ಬಾಲಕಿಯರನ್ನು ಈ ನರಕದಿಂದ ರಕ್ಷಿಸಿರುವ ಪೊಲೀಸರು ಆರು ಮಹಿಳೆಯರು ಸೇರಿದಂತೆ ಎಂಟು ಜನರನ್ನು ಬಂಧಿಸಿದ್ದಾರೆ.

ವಿಶ್ವ ಮಾನವ ಕಳ್ಳಸಾಗಣೆ ವಿರೋಧಿ ದಿನವಾದ ಜು.30ರಂದು ನಿರ್ದಿಷ್ಟ ಮಾಹಿತಿಯ ಮೇರೆಗೆ ‘ಮುಸ್ಕಾನ್’ ಕಾರ್ಯಾಚರಣೆಯ ಭಾಗವಾಗಿ ಮಕ್ಕಳ ನೆರವು ಸಂಸ್ಥೆಗಳ ಸಹಕಾರದೊಂದಿಗೆ ಪೋಲಿಸರು ಈ ದಾಳಿಗಳನ್ನು ನಡೆಸಿದ್ದರು.

ರಕ್ಷಿಸಲಾದ ಬಾಲಕಿಯರಲ್ಲಿ ನಾಲ್ವರು ಏಳು ವರ್ಷಕ್ಕಿಂತ ಕಡಿಮೆ ಪ್ರಾಯದವರಾಗಿದ್ದು,ಓರ್ವ ಬಾಲಕಿಯ ವಯಸ್ಸು ಕೇವಲ ಮೂರೂವರೆ ವರ್ಷವಾಗಿದೆ ಎಂದು ರಾಚಕೊಂಡಾ ಪೊಲೀಸ್ ಆಯುಕ್ತ ಮಹೇಶ ಎಂ.ಭಾಗವತ ಅವರು ಸುದ್ದಿಗಾರರಿಗೆ ತಿಳಿಸಿದರು.

ಮಕ್ಕಳನ್ನು ವೇಶ್ಯಾವೃತ್ತಿಗೆ ತಳ್ಳಲು ಆರೋಪಿಗಳು ಐದರ ಪ್ರಾಯದ ಬಾಲಕಿಯರಿಗೆ ಸೆಕ್ಸ್ ಹಾರ್ಮೋನ್‌ಗಳನ್ನು ಕೊಡಿಸಿದ್ದರು. ಸ್ವಾಮಿ ಎಂಬ ವೈದ್ಯ ಈ ಮಕ್ಕಳಿಗೆ ಲೈಂಗಿಕ ಬೆಳವಣಿಗೆ ಚುಚ್ಚುಮದ್ದುಗಳನ್ನು ನೀಡುತ್ತಿದ್ದ ಮತ್ತು ಪ್ರತಿ ಡೋಸ್ ಹಾರ್ಮೋನ್‌ಗೆ 25,000 ರೂ.ಶುಲ್ಕವನ್ನು ಆರೋಪಿಗಳಿಂದ ಪಡೆಯುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಒಂಭತ್ತು ಬಾಲಕಿಯರು ಆರೋಪಿಗಳ ಮಕ್ಕಳಲ್ಲ ಎನ್ನುವುದು ದೃಢಪಟ್ಟಿದೆ. ಈ ಮಕ್ಕಳು ನಾಪತ್ತೆಯಾದವರೋ ಅಥವಾ ಅಪಹೃತರೋ ಎನ್ನುವುದನ್ನು ನಾವು ಖಚಿತಪಡಿಸಿಕೊಳ್ಳಬೇಕಿದೆ. ರಕ್ಷಿಸಲಾಗಿರುವ ಬಾಲಕಿಯರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದೂ ಭಾಗವತ ತಿಳಿಸಿದರು.

ಬಂಧಿತ ಆರೋಪಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News