ಬೈಕಂಪಾಡಿ ಎಪಿಎಂಸಿ ರಾಜಾ ಕಾಲುವೆ ಸುಸ್ಥಿತಿಯಲ್ಲಿಡಲು ಸಚಿವ ಖಾದರ್ ಸೂಚನೆ
ಮಂಗಳೂರು, ಆ.1: ಬೈಕಂಪಾಡಿ ಎಪಿಎಂಸಿ ಪ್ರಾಂಗಣದಲ್ಲಿರುವ ರಾಜಾಕಾಲುವೆಯನ್ನು ಸಮರ್ಪಕವಾಗಿ ಸ್ವಚ್ಛಗೊಳಿಸಿ ಸುಸ್ಥಿತಿಯಲ್ಲಿಡುವಂತೆ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೈಕಂಪಾಡಿಯ ಅಂಗರಗುಂಡಿ ಪ್ರದೇಶಕ್ಕೆ ಬುಧವಾರ ಭೇಟಿ ನೀಡಿದ ಅವರು ಎಪಿಎಂಸಿ ರಾಜಾಕಾಲುವೆಯನ್ನು ವೀಕ್ಷಿಸಿದ ಬಳಿಕ ಮಾತನಾಡಿದರು. ಎರಡು ತಿಂಗಳ ಹಿಂದೆ ಸುರಿದ ಭಾರೀ ಮಳೆಗೆ ಬೈಕಂಪಾಡಿ ಎಪಿಎಂಸಿ ಪ್ರಾಂಗಣದ ಕೊನೆಯಲ್ಲಿರುವ ರಾಜಾಕಾಲುವೆಯು ತುಂಬಿ ಪಕ್ಕದಲ್ಲಿರುವ ಅಂಗರಗುಂಡಿ ಜನವಸತಿ ಪ್ರದೇಶಕ್ಕೆ ನೀರು ನುಗ್ಗಿ ಸುಮಾರು 50 ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದೆ. ಈಗಾಗಲೇ ರಾಜಾಕಾಲುವೆಯ ತಡೆಗೋಡೆಯು ಹಲವೆಡೆ ಬಿದ್ದು ಹೋಗಿದ್ದು, ನೀರು ಸಮರ್ಪಕವಾಗಿ ಹರಿಯಲು ಅಡ್ಡಿಯಾಗಿವೆ. ಇದರಿಂದ ಮಳೆ ಬಂದಾಗ ಇಲ್ಲಿನ ನಿವಾಸಿಗಳು ಆತಂಕದಲ್ಲಿ ಜೀವಿಸುವಂತಾಗಿದೆ ಎಂದು ಸ್ಥಳೀಯರು ಸಚಿವರ ಗಮನಕ್ಕೆ ತಂದರು.
ಇದಕ್ಕೆ ಸ್ಪಂದಿಸಿದ ಸಚಿವರು, ಅಂಗರಗುಂಡಿ ರಾಜಾಕಾಲುವೆಯ ಹೂಳನ್ನೆತ್ತಿ, ನೀರು ಸರಾಗ ಹರಿಯಲು ಕೂಡಲೇ ಕ್ರಮ ಕೈಗೊಳ್ಳಬೇಕು. ಅಲ್ಲದೇ ತಡೆಗೋಡೆಯನ್ನು ಪುನಃ ನಿರ್ಮಿಸಲು ಎಪಿಎಂಸಿ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭ ಸ್ಥಳೀಯರಾದ ಹಾರಿಸ್ ಬೈಕಂಪಾಡಿ, ಇಲ್ಯಾಸ್ ಮತ್ತಿತರರಿದ್ದರು. ಇದಕ್ಕೂ ಮೊದಲು ಸಚಿವರು, ಅಪಘಾತದಲ್ಲಿ ಕಾಲನ್ನು ಕಳೆದು ಕೊಂಡಿರುವ ಅಂಗರಗುಂಡಿಯ ಟೆಂಪೋ ಚಾಲಕ ಅಬ್ದುಲ್ಲಾ ಎಂಬವರ ಮನೆಗೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ಅಲ್ಲದೆ ಸರಕಾರದಿಂದ ದೊರಕುವ ನೆರವು ಒದಗಿಸುವುದಾಗಿ ಭರವಸೆ ನೀಡಿದರು.