ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಇಮ್ರಾನ್ ಖಾನ್ ಭಾರತದಿಂದ ಆಹ್ವಾನಿಸಿದ್ದು ಯಾರನ್ನು ಗೊತ್ತಾ?
ಇಸ್ಲಾಮಾಬಾದ್, ಆ.2: ಪಾಕಿಸ್ತಾನದ ನೂತನ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸುವ ಸಂಬಂಧ ಪಾಕಿಸ್ತಾನ ತೆಹ್ರಿಕ್- ಐ- ಇನ್ಸಾಫ್ ಸರ್ಕಾರಿ ಒಪ್ಪಿಗೆಗೆ ಕಾಯುತ್ತಿದೆ. ಆದರೆ ಈಗಾಗಲೇ ಭಾರತೀಯ ಕ್ರಿಕೆಟ್‌ನ ಹಳೆ ಹುಲಿಗಳು ಮತ್ತು ಬಾಲಿವುಡ್ ತಾರೆಗಳಿಗೆ ಆಹ್ವಾನ ಕಳುಹಿಸಲಾಗಿದೆ.
65 ವರ್ಷದ ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ನೇತೃತ್ವದಲ್ಲಿ ಸಮ್ಮಿಶ್ರ ಸರ್ಕಾರ ಮುಂದಿನ ವಾರ ಅಸ್ತಿತ್ವಕ್ಕೆ ಬರುವ ನಿರೀಕ್ಷೆ ಇದೆ. ಕ್ರಿಕೆಟ್‌ನಲ್ಲಿ ಇಮ್ರಾನ್ ಅವರ ಸಮಕಾಲೀನರಾಗಿದ್ದ ಕಪಿಲ್ ದೇವ್, ಸುನೀಲ್ ಗಾವಸ್ಕರ್, ನವಜ್ಯೋತ್ ಸಿಂಗ್ ಸಿಧು ಹಾಗೂ ಬಾಲಿವುಡ್ ತಾರೆ ಅಮೀರ್ ಖಾನ್ ಅವರಿಗೆ ಆಹ್ವಾನ ಪತ್ರ ಕಳುಹಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ.
ಇಮ್ರಾನ್ ಹಾಗೂ ಅವರ ಸಮಕಾಲೀನ ಕ್ರಿಕೆಟಿಗರ ನಡುವಿನ ಉತ್ತಮ ಬಾಂಧವ್ಯ ಮುಂದುವರಿದಿರುವ ಹಿನ್ನೆಲೆಯಲ್ಲಿ ಅವರನ್ನು ಸಮಾರಂಭಕ್ಕೆ ಆಹ್ವಾನಿಸಲಾಗಿದೆ ಎಂದು ಮೂಲಗಳು ಹೇಳಿವೆ. ಜುಲೈ 25ರಂದು ಇಮ್ರಾನ್ ತಮ್ಮ ವಿಜಯೋತ್ಸವ ಭಾಷಣದಲ್ಲೂ, ಭಾರತದ ಜತೆಗಿನ ಸಂಬಂಧ ತಮ್ಮ ಕ್ರಿಕೆಟ್ ದಿನದಿಂದಲೂ, ತಾನು ಭಾರತದಲ್ಲಿ ಪ್ರವಾಸ ಕೈಗೊಂಡ ದಿನಗಳಿಂದಲೂ ಇದೆ ಎಂದು ಟೀಕಾಕಾರರಿಗೆ ಸ್ಪಷ್ಟಪಡಿಸಿದ್ದರು.
ಸರ್ಕಾರೇತರ ಗಣ್ಯರಿಗೆ ಆಹ್ವಾನ ಪತ್ರಿಕೆ ಕಳುಹಿಸಿದ್ದರೂ, ಮೋದಿಯವರನ್ನು ಆಹ್ವಾನಿಸುವುದಕ್ಕೆ ಸಂಬಂಧಿಸಿದಂತೆ, ವಿದೇಶಗಳ ರಾಜಕೀಯ ಮುಖಂಡರನ್ನು ಕರೆಯಬಹುದೇ ಎಂಬ ಬಗ್ಗೆ ವಿದೇಶಾಂಗ ಕಚೇರಿಯ ಸ್ಪಷ್ಟನೆ ಕೋರಲಾಗಿದೆ. ಆಗಸ್ಟ್ 11ರಂದು ನೂತನ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಸ್ವಾತಂತ್ರ್ಯ ದಿನಾಚರಣೆಗೆ ಮೂರು ದಿನ ಮೊದಲು ಹೊಸ ಸರ್ಕಾರ ರಚನೆಯಾಗಲಿದೆ.
ಮೋದಿ ಹಾಗೂ ದಕ್ಷಿಣ ಏಷ್ಯಾದ ಇತರ ದೇಶಗಳ ಮುಖಂಡರನ್ನು ಸಮಾರಂಭಕ್ಕೆ ಆಹ್ವಾನಿಸಲು ಇಮ್ರಾನ್ ಪಕ್ಷ ಅನುಮತಿ ಕೋರಿದೆ ಎಂದು ಮೂಲಗಳು ಹೇಳಿವೆ.