ಮಾನವ ಕಳ್ಳಸಾಗಣೆ ಜಾಲದಿಂದ 39 ಯುವತಿಯರ ರಕ್ಷಣೆ

Update: 2018-08-01 15:57 GMT

ಹೊಸದಿಲ್ಲಿ, ಆ.1: ದಿಲ್ಲಿ ಮಹಿಳಾ ಆಯೋಗ ಹಾಗೂ ನಗರ ಪೊಲೀಸರು ಬುಧವಾರ ಬೆಳಿಗ್ಗೆ ಪಹರ್‌ಗಂಜ್ ಪ್ರದೇಶದ ಹೋಟೆಲ್‌ನಲ್ಲಿ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ 39 ನೇಪಾಳಿ ಹುಡುಗಿಯರನ್ನು ರಕ್ಷಿಸಲಾಗಿದೆ ಎಂದು ಮಹಿಳಾ ಆಯೋಗ ತಿಳಿಸಿದೆ.

ಪಹರ್‌ಗಂಜ್‌ನ ‘ಹೃದಯ್ ಇನ್’ ಹೋಟೆಲ್‌ನಲ್ಲಿ ಹಲವು ಹುಡುಗಿಯರನ್ನು ಕೂಡಿಹಾಕಲಾಗಿದೆ ಎಂಬ ಮಾಹಿತಿಯಂತೆ ಬುಧವಾರ ಬೆಳಗ್ಗಿನ ಜಾವ 1ಗಂಟೆಯಿಂದ 6 ಗಂಟೆಯವರೆಗೆ ಕಾರ್ಯಾಚರಣೆ ನಡೆಸಲಾಗಿದ್ದು, 39 ನೇಪಾಳಿ ಹುಡುಗಿಯರನ್ನು ರಕ್ಷಿಸಲಾಗಿದೆ. ಇಡೀ ಹೋಟೆಲ್‌ನಲ್ಲಿ ಮಾನವ ಕಳ್ಳಸಾಗಣೆ ಮೂಲಕ ಒಟ್ಟುಗೂಡಿಸಲಾದ ನೇಪಾಳಿ ಹುಡುಗಿಯರಿದ್ದರು. ಇವರನ್ನು ಗಲ್ಫ್ ರಾಷ್ಟ್ರಗಳಿಗೆ ರವಾನಿಸಲಾಗುತ್ತಿತ್ತು. ಈ ಮೂಲಕ ಮಾನವ ಕಳ್ಳಸಾಗಣೆಯ ಬೃಹತ್ ಜಾಲವೊಂದನ್ನು ಬೇಧಿಸಲಾಗಿದೆ ಎಂದು ದಿಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ಟ್ವೀಟ್ ಮಾಡಿದ್ದಾರೆ.

ಈಗಾಗಲೇ ಕೆಲವು ಹುಡುಗಿಯರನ್ನು ಶ್ರೀಲಂಕಾಕ್ಕೆ ಕಳುಹಿಸಲಾಗಿದೆ. ಇವರನ್ನು ಸಂಪರ್ಕಿಸಲು ಸಾಧ್ಯವಾಗಿಲ್ಲ ಎಂದು ಮಲಿವಾಲ್ ತಿಳಿಸಿದ್ದಾರೆ. ಜುಲೈ 25ರ ಬಳಿಕ ನಡೆಯುತ್ತಿರುವ ಮೂರನೇ ಕಾರ್ಯಾಚರಣೆ ಇದಾಗಿದೆ. ಜುಲೈ 25ರಂದು ನೈರುತ್ಯ ದಿಲ್ಲಿಯ ಮುನ್ರಿಕಾ ಪ್ರದೇಶದಿಂದ 16 ನೇಪಾಳಿ ಹುಡುಗಿಯರನ್ನು ರಕ್ಷಿಸಲಾಗಿತ್ತು. ಜುಲೈ 30ರಂದು ವಸಂತ್ ವಿಹಾರ್ ಪ್ರದೇಶದಿಂದ 16 ನೇಪಾಳಿ ಹುಡುಗಿಯರ ಸಹಿತ 18 ಹುಡುಗಿಯರನ್ನು ರಕ್ಷಿಸಲಾಗಿತ್ತು.

   ಈ ಪ್ರಕರಣಗಳ ಹಿನ್ನೆಲೆಯಲ್ಲಿ ದಿಲ್ಲಿ ಲೆಗವರ್ನರ್ ಹಾಗೂ ದಿಲ್ಲಿ ಪೊಲೀಸ್ ಆಯುಕ್ತರೊಂದಿಗೆ ಸಭೆ ನಡೆಸಿ ಸೂಕ್ತ ಕ್ರಮಕ್ಕೆ ಸೂಚಿಸಬೇಕು ಎಂದು ಗೃಹ ಸಚಿವ ರಾಜನಾಥ್ ಸಿಂಗ್‌ಗೆ ಸ್ವಾತಿ ಮಲಿವಾಲ್ ಮನವಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News