×
Ad

ಯುಎಇ ಅಕ್ರಮ ವಾಸಿಗಳಿಗೆ ಸಾರ್ವಜನಿಕ ಕ್ಷಮಾ ಪ್ರಕ್ರಿಯೆ ಆರಂಭ

Update: 2018-08-01 22:35 IST

ದುಬೈ, ಆ. 1: ಅಕ್ರಮ ವಾಸಿಗಳ ಬಹುನಿರೀಕ್ಷಿತ ಸಾರ್ವಜನಿಕ ಕ್ಷಮೆ ಯುಎಇಯಲ್ಲಿ ಇಂದು ಆರಂಭಗೊಂಡಿದೆ. ಕಾನೂನುಬಾಹಿರವಾಗಿ ವಾಸಿಸುತ್ತಿರುವ ವಿದೇಶಿಯರು ಯಾವುದೇ ಭೀತಿಯಿಲ್ಲದೆ ಯುಎಇಯಿಂದ ನಿರ್ಗಮಿಸಲು ಹಾಗೂ ದಾಖಲೆಗಳನ್ನು ಸರಿಪಡಿಸಿಕೊಳ್ಳಲು ಅನುವು ಮಾಡಿಕೊಡುವ ಈ ಯೋಜನೆ ವರದಾನವಾಗಿದೆ.

 ಆಗಸ್ಟ್ ಒಂದರಿಂದ ಮೂರು ತಿಂಗಳವರೆಗೆ ಸಾರ್ವಜನಿಕ ಕ್ಷಮೆ ಜಾರಿಯಲ್ಲಿರಲಿದೆ. ಹಲವು ಸಾಮಾಜಿಕ ಸಂಘಟನೆಗಳು ಭಾರತೀಯರಿಗೆ ಸಹಾಯ ಮಾಡಲು ಕೇಂದ್ರಗಳನ್ನು ಆರಂಭಿಸಿವೆ.

ಯುಎಇಯಲ್ಲಿ ಅನಧಿಕೃತವಾಗಿ ವಾಸಿಸುತ್ತಿರುವ ಭಾರತೀಯರ ಸಂಖ್ಯೆ ಇತರ ದೇಶಗಳ ನಿವಾಸಿಗಳಿಗೆ ಹೋಲಿಸಿದರೆ ಕಡಿಮೆ. ಆದಾಗ್ಯೂ, ಹಲವು ಜನರ ಕಥೆಗಳು ಕಣ್ಣೀರು ತರಿಸುತ್ತಿವೆ. ಶಾರ್ಜಾದಲ್ಲಿ 38 ವರ್ಷಗಳಿಂದ ಅನಧಿಕೃತವಾಗಿ ನೆಲೆಸಿರುವ ಕುಟುಂಬವೊಂದನ್ನು ಇತ್ತೀಚೆಗೆ ಪತ್ತೆ ಹಚ್ಚಲಾಗಿದೆ. ಅಗತ್ಯ ದಾಖಲೆಗಳ ಕೊರತೆಯ ಹಿನ್ನೆಲೆಯಲ್ಲಿ ಆ ಕುಟುಂಬದ ಮಕ್ಕಳು ವಿದ್ಯಾಭ್ಯಾಸವಿಲ್ಲದೆ ಕಾಲ ಕಳೆಯಬೇಕಾಗಿ ಬಂದಿರುವುದು ಶೋಚನೀಯ.

ಕೆಲವು ಕಂಪೆನಿಗಳು ಇಲ್ಲಿನ ಬ್ಯಾಂಕ್‌ಗಳಿಗೆ ಟೋಪಿ ಹಾಕಿ ಕಾಲು ಕಿತ್ತ ಕಾರಣ ನಿರ್ಗತಿಕರಾದ ಹಲವು ಉದ್ಯೋಗಿಗಳು ಇಲ್ಲಿ ಕೆಲವು ವರ್ಷಗಳಿಂದ ಅನಧಿಕೃತವಾಗಿ ವಾಸಿಸುತ್ತಿದ್ದಾರೆ. ಇಂಥವರೂ ತಮ್ಮ ದಾಖಲೆಗಳನ್ನು ಸರಿಪಡಿಸಿ ಹೊಸ ಕಂಪೆನಿಗಳಿಗೆ ಉದ್ಯೋಗಕ್ಕೆ ಸೇರ್ಪಡೆಯಾಗುವ ಹಲವು ಅವಕಾಶಗಳನ್ನು ಯುಎಇ ಸರಕಾರ ತೆರೆದಿಟ್ಟಿದೆ.

ಮಧ್ಯರಾತ್ರಿವರೆಗೆ ತೆರೆದಿರುವ ಕಚೇರಿಗಳು

ದುಬೈಯಲ್ಲಿ ಅಲ್ಲಿನ ಗೃಹ ಇಲಾಖೆಯು ಸಾರ್ವಜನಿಕ ಕ್ಷಮೆ ಪ್ರಕ್ರಿಯೆಗೆ ಹಲವು ರೀತಿಯಲ್ಲಿ ಸಜ್ಜಾಗಿದೆ. ಅರ್ಧರಾತ್ರಿವರೆಗೆ ಕಚೇರಿಗಳು ತೆರೆದಿರುತ್ತವೆ. ಈ ಸಮಯದಲ್ಲಿ ಫಲಾನುಭವಿಗಳು ಇದರ ಪ್ರಯೋಜನಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಇಲಾಖೆಯ ಮಹಾ ನಿರ್ದೇಶಕ ಬ್ರಿಗೇಡಿಯರ್ ಮುಹಮ್ಮದ್ ಅಹ್ಮದ್ ಅಲಿ  ತಿಳಿಸಿದ್ದಾರೆ.

ಗೃಹ ಇಲಾಖೆಯ ಕಚೇರಿಗಳು ಸಂಜೆ 5 ಗಂಟೆಯಿಂದ ಮಧ್ಯರಾತ್ರಿವರೆಗೆ ತೆರೆದಿರುತ್ತವೆ. ಸೆಪ್ಟಂಬರ್ ಕೊನೆಯವರೆಗೆ ಇದೇ ಸಮಯವನ್ನು ನಿಗದಿಗೊಳಿಸಲಾಗಿದೆ. ಸದ್ಯ ಸುಮಾರು 4000ದವರೆಗೆ ಅರ್ಜಿ ಲಭಿಸುತ್ತಿದೆ ಎಂದು ಬ್ರಿಗೇಡಿಯರ್ ತಿಳಿಸಿದ್ದಾರೆ.

ಮರಳಿ ಯುಎಇಗೆ ಬರಬಹುದು

ಸಾರ್ವಜನಿಕ ಕ್ಷಮೆಯ ಮೂಲಕ ಊರಿಗೆ ಹಿಂದಿರುಗುವವರು ಮರಳಿ ಯುಎಇಗೆ ಬರಬಹುದಾಗಿದೆ. ಗಂಭೀರ ಕ್ರಿಮಿನಲ್ ಕೇಸುಗಳಲ್ಲಿ ಪಾಲ್ಗೊಂಡವರಾಗಿದ್ದರೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಹೊಸ ಸ್ಪಾನ್ಸರ್ ಲಭ್ಯವಿದ್ದರೆ 500 ದಿರ್ಹಂ (ಸುಮಾರು 9,300 ರೂಪಾಯಿ) ಪಾವತಿಸಿ ದುಬೈನ ‘ಅಮರ್ ಸೆಂಟರ್’ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಕಳೆದ ಸಾರ್ವಜನಿಕ ಕ್ಷಮೆಯ ಅವಧಿಯಲ್ಲಿ ಊರಿಗೆ ತೆರಳಿದ್ದ ಹಲವು ಮಂದಿಗೆ ಮರಳಿ ಯುಎಇಗೆ ಬಂದು ಕೆಲಸ ಮಾಡಲು ಸಾಧ್ಯವಾಗಿದೆ. ಆ ಸಂದರ್ಭದಲ್ಲಿ ಸುಮಾರು 70,000 ಭಾರತೀಯರು ಸಾರ್ವಜನಿಕ ಕ್ಷಮೆಯ ಪ್ರಯೋಜನವನ್ನು ಪಡೆದುಕೊಂಡಿದ್ದರು.

 ಅಬುಧಾಬಿ, ಶಹಾಮಾ, ಅಲ್ ಐನ್ ಗರ್ಬಿಯಾ, ಅವೀರ್ ಎಂಬಿತ್ಯಾದಿ ಭಾಗಗಳಲ್ಲಿ ಪ್ರತ್ಯೇಕ ನೋಂದಣಿ ಕಚೇರಿಗಳನ್ನು ಆರಂಭಿಸಲಾಗಿದೆ. ಇನ್ನಿತರ ಎಮಿರೇಟ್‌ಗಳಲ್ಲಿರುವ ಎಮಿಗ್ರೇಶನ್ ಕೇಂದ್ರಗಳಲ್ಲಿಯೂ ಇದಕ್ಕೆ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ. ಎಲ್ಲಾ ಎಮಿರೇಟ್‌ಗಳಲ್ಲಿಯೂ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಕಚೇರಿ ತೆರೆದಿರಲಿದ್ದು, ದುಬೈಲ್ಲಿ ಸಾಯಂಕಾಲ 5ರಿಂದ ರಾತ್ರಿ 12ರವರೆಗೆ ತೆರೆದಿರಲಿದೆ.

ಭಾರತೀಯ ಸಂಘಟನೆಗಳಿಂದ ಸಹಾಯ ಹಸ್ತ

ಯುಎಇಯಲ್ಲಿ ದಾಖಲೆಗಳಿಲ್ಲದೆ ಸಂಕಷ್ಟದಲ್ಲಿರುವ ಭಾರತೀಯರ ಸಹಾಯಕ್ಕಾಗಿ ಕೆಎಂಸಿಸಿ ಸೇರಿದಂತೆ ವಿವಿಧ ಭಾರತೀಯ ಸಂಘಟನೆಗಳು ಮುಂದೆ ಬಂದಿವೆ. ತುರ್ತು ಪ್ರಮಾಣಪತ್ರಕ್ಕಾಗಿತಗಲುವ ವೆಚ್ಚವನ್ನು ಭರಿಸಲು ದುಬೈ ಕೆಎಂಸಿಸಿ ಮುಂದಾಗಿದೆ. ವಿಮಾನಟಿಕೆಟ್ ವ್ಯವಸ್ಥೆಯನ್ನು ಒದಗಿಸಿಕೊಡಲು ಕೆಎಂಸಿಸಿ ಸಜ್ಜಾಗಿದೆ.

ಈಗಾಗಲೇ 180 ಮಂದಿ ಕೆಎಂಸಿಸಿ ಮೂಲಕ ನೋಂದಣಿ ಮಾಡಿರುವುದಾಗಿ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಮುರಿಚ್ಚಾಂಡಿ ತಿಳಿಸಿದ್ದಾರೆ.

►ಯುಎಇ ಬಿಡುವುದಾದರೆ ನಿರ್ಗಮನ ಅನುಮತಿ (ಎಕ್ಸಿಟ್ ಪರ್ಮಿಟ್)ಯನ್ನು ಪಡೆದುಕೊಳ್ಳಬೇಕು. ಇದಕ್ಕಾಗಿ ಬೆರಳಚ್ಚು ತೆಗೆದುಕೊಳ್ಳಲಾಗುತ್ತದೆ ಮತ್ತು ಕಣ್ಣಿನ ಸ್ಕಾನಿಂಗ್ ಮಾಡಲಾಗುತ್ತದೆ. ಇದಕ್ಕೆ ತಗಲುವ ವೆಚ್ಚ 220 ದಿರ್ಹಂ.

►ಪಾಸ್‌ಪೋರ್ಟ್ ಸೇರಿದಂತೆ ಕೈಯಲ್ಲಿ ಯಾವುದೇ ದಾಖಲೆಗಳು ಇಲ್ಲದಂತಹ ಅಕ್ರಮ ನಿವಾಸಿಗಳಿಗೆ ಎರಡು ವರ್ಷ ಯುಎಇ ಪ್ರವೇಶಕ್ಕೆ ನಿಷೇಧವಿದೆ.

►ಸ್ಪಾನ್ಸರ್ ಕೈಯಿಂದ ತಪ್ಪಿಸಿ ಭೂಗತರಾದವರು 500 ದಿರ್ಹಂ ದಂಡ ಪಾವತಿಸಬೇಕಾಗಿದೆ. ಅವರಿಗೂ ಯುಎಇ ಮರುಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News