ಮಂಗಳೂರು, ಮಣಿಪಾಲ ಕೆಎಂಸಿಯಲ್ಲಿ ಹೃದಯ ವೈಫಲ್ಯ ಚಿಕಿತ್ಸಾಲಯ ಸೇವೆ ಆರಂಭ

Update: 2018-08-01 17:33 GMT

ಮಣಿಪಾಲ, ಆ.1: ಮಣಿಪಾಲ ಮತ್ತು ಮಂಗಳೂರು ಕಸ್ತೂರ್ಬಾ ಆಸ್ಪತ್ರೆಗಳಲ್ಲಿ ಹೃದಯ ವೈಫಲ್ಯ ಚಿಕಿತ್ಸಾಲಯಗಳನ್ನು ಪ್ರಾರಂಭಿಸಲಾಗಿದೆ. ಮಣಪಾಲ ಕೆಎಂಸಿಯಲ್ಲಿ ಇಂದು ಮಣಿಪಾಲ ಬೋಧಕ ಆಸ್ಪತ್ರೆ ಸಮೂಹಗಳ ಮುಖ್ಯ ನಿರ್ವಹಣಾಧಿಕಾರಿ ಸಿ.ಜಿ.ಮುತ್ತಣ್ಣ ಅವರು ಹೃದಯ ವೈಫಲ್ಯ ಚಿಕಿತ್ಸಾಲಯವನ್ನು ಉದ್ಘಾಟಿಸಿದರು.

ಈ ಚಿಕಿತ್ಸಾಲಯವು ಸೋಮವಾರದಿಂದ ಬುಧವಾರದವರೆಗೆ ಅಪರಾಹ್ನ 2:30ರಿಂದ ಸಂಜೆ 4:30ರವರೆಗೆ ಕಾರ್ಯಾಚರಿಸಲಿದೆ. ಮಂಗಳೂರು ಚಿಕಿತ್ಸಾಲ ಯವು ಪ್ರತಿ ಬುಧವಾರದಂದು ಅಪರಾಹ್ನ 1:30ರಿಂದ ಸಂಜೆ 4:30ರವರೆಗೆ ಕಾರ್ಯಾಚರಿಸಲಿದೆ. ಹೃದಯ ವೈಫಲ್ಯ ಚಿಕಿತ್ಸಾಲಯದಲ್ಲಿ ರೋಗಿಗಳ ತಪಾಸಣೆಗೆ ವಿಶೇಷ ರಿಯಾಯಿತಿಯನ್ನೂ ನೀಡಲಾಗುವುದು ಎಂದು ಆಸ್ಪತ್ರೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

‘ಹೃದಯದ ಸ್ನಾಯುಗಳು ದುರ್ಬಲಗೊಂಡಾಗ ಆಮ್ಲಜನಕ ಪೂರೈಕೆಗೆ ಸಾಕಾಗುವಷ್ಟು ರಕ್ತವನ್ನು ಪಂಪ್ ಮಾಡಲು ವಿಫಲವಾದಾಗ ಹೃದಯ ವೈಫಲ್ಯ ಸಂಭವಿಸುತ್ತದೆ.’ ಎಂದು ಚಿಕಿತ್ಸಾಲಯವನ್ನು ಉದ್ಘಾಟಿಸುತ್ತಾ ಸಿ.ಜಿ.ಮುತ್ತಣ್ಣ ತಿಳಿಸಿದರು. ಇಂಥ ಸಂದರ್ಭದಲ್ಲಿ ಈ ಚಿಕಿತ್ಸಾಲಯಕ್ಕೆ ರೋಗಿಯನ್ನು ಕರೆ ತರುವುದರಿಂದ ಸೂಕ್ತ ಮಾರ್ಗದರ್ಶನ ಸಿಗಲು ಸಾಧ್ಯವಾಗಲಿದೆ. ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಇಂಥ ಚಿಕಿತ್ಸಾಲಯಗಳು ರೋಗಿಗಳ ಚಿಕಿತ್ಸೆಯಲ್ಲಿ ಅತ್ಯುತ್ತಮ ಫಲಿತಾಂಶ ನೀಡುತ್ತಿದೆ ಎಂದವರು ನುಡಿದರು.

ಕೆಎಂಸಿ ಮಣಿಪಾಲದ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಸೈಟೋಟಾಕ್ಸಿಕ್ ಔಷಧಿಗಳಿಂದ ಹೃದಯ ವೈಫಲ್ಯಕ್ಕೊಳಗಾದ ರೋಗಿಗಳಿಗೆ ಚಿಕಿತ್ಸಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತದೆ ಎಂದರು. ಮಣಿಪಾಲ ಕೆಎಂಸಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿ ವಿಭಾಗದ ಮುಖ್ಯಸ್ಥ ಡಾ.ಟಾಮ್ ದೇವಸಿಯಾ ಅವರೂ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News