ನ್ಯಾಯಾಧೀಶರ ಪದೋನ್ನತಿ: ಇಬ್ಬರ ಹೆಸರು ಅಂತಿಮಗೊಳಿಸಲು ನಿರ್ಧಾರ

Update: 2018-08-02 14:18 GMT
ಸುಪ್ರೀಂಕೋರ್ಟ್‌

ಹೊಸದಿಲ್ಲಿ, ಆ.2: ಸುಪ್ರೀಂಕೋರ್ಟ್‌ನ ನ್ಯಾಯಾಧೀಶರ ಹುದ್ದೆಗೆ ಮದ್ರಾಸ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶೆ ಇಂದಿರಾ ಬ್ಯಾನರ್ಜಿ ಹಾಗೂ ಒರಿಸ್ಸಾ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ವಿನೀತ್ ಶರಣ್ ಅವರ ಹೆಸರನ್ನು ಕೇಂದ್ರ ಸರಕಾರ ಮುಂದಿನ ವಾರ ಅಂತಿಮಗೊಳಿಸುವ ಸಾಧ್ಯತೆಯಿದೆ. ಆದರೆ ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಕುರಿತು ಇನ್ನೂ ಯಾವುದೇ ನಿರ್ಧಾರಕ್ಕೆ ಬಂದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಾನೂನು ಸಚಿವಾಲಯವು ಇಬ್ಬರು ನ್ಯಾಯಾಧೀಶರ ಹೆಸರನ್ನು ಪ್ರಧಾನಮಂತ್ರಿಯವರ ಕಚೇರಿಗೆ ಅಂತಿಮ ಒಪ್ಪಿಗೆಗಾಗಿ ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಪ್ರೀಂಕೋರ್ಟ್‌ಗೆ ನ್ಯಾಯಾಧೀಶರನ್ನು ಪದೋನ್ನತಿಗೊಳಿಸುವ ಅಧಿಕಾರ ಹೊಂದಿರುವ ಐವರು ಉನ್ನತ ನ್ಯಾಯಾಧೀಶರನ್ನೊಳಗೊಂಡಿರುವ ಕೊಲಿಜಿಯಂ ಜನವರಿಯಲ್ಲಿ ನ್ಯಾ.ಜೋಸೆಫ್ ಅವರ ಹೆಸರನ್ನು ಪ್ರಸ್ತಾವಿಸಿತ್ತು. ನ್ಯಾ.ಜೋಸೆಫ್ ಈಗ ಉತ್ತರಾಖಂಡ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರಾಗಿದ್ದಾರೆ. ಈ ಪ್ರಸ್ತಾವದ ಬಗ್ಗೆ ಮರುಪರಿಶೀಲನೆ ನಡೆಸುವಂತೆ ಎಪ್ರಿಲ್‌ನಲ್ಲಿ ಕಾನೂನು ಸಚಿವರು ಮುಖ್ಯ ನ್ಯಾಯಾಧೀಶರಿಗೆ ಪತ್ರ ಬರೆದಿದ್ದರು. ಜ್ಯೇಷ್ಠತಾ ಪಟ್ಟಿಯಲ್ಲಿ ಜೋಸೆಫ್ 42ನೇ ಸ್ಥಾನದಲ್ಲಿದ್ದಾರೆ ಮತ್ತು ಜೋಸೆಫ್ ಅವರ ಊರಾದ ಕೇರಳಕ್ಕೆ ಈಗಾಗಲೇ ಸುಪ್ರೀಂಕೋರ್ಟ್‌ನಲ್ಲಿ ಪ್ರಾತಿನಿಧ್ಯವಿದೆ ಎಂದು ಕಾನೂನು ಸಚಿವಾಲಯ ತಿಳಿಸಿತ್ತು.

ಜ್ಯೇಷ್ಠತಾ ಪಟ್ಟಿಯಲ್ಲಿ ಹಿರಿತನವನ್ನು ಕಡೆಗಣಿಸುವುದು ಸರಿಯಲ್ಲ ಎಂದು ತಿಳಿಸಲಾಗಿತ್ತು. ಜುಲೈ 16ರಂದು ಕಾನೂನು ಸಚಿವಾಲಯದ ವಾದವನ್ನು ತಿರಸ್ಕರಿಸಿದ್ದ ಕೊಲಿಜಿಯಂ, ತನ್ನ ಈ ಹಿಂದಿನ ನಿರ್ಧಾರವನ್ನೇ ಪುನರುಚ್ಚರಿಸಿತ್ತು. ಕಾನೂನು ಇಲಾಖೆ ಕಳುಹಿಸಿರುವ ಎರಡು ಪತ್ರದಲ್ಲೂ ನ್ಯಾಯಾಧೀಶ ಜೋಸೆಫ್ ಅವರ ಅರ್ಹತೆಯನ್ನು ಪ್ರಶ್ನಿಸಲಾಗಿಲ್ಲ . ಆದ್ದರಿಂದ ಅವರ ಹೆಸರನ್ನೇ ಪುನರುಚ್ಚರಿಸಿರುವುದಾಗಿ ಕೊಲಿಜಿಯಂ ತಿಳಿಸಿದೆ. ಕೊಲಿಜಿಯಂ ಮತ್ತೊಮ್ಮೆ ಪ್ರಸ್ತಾವನೆ ಕಳಿಸಿದರೆ ಅದನ್ನು ಸರಕಾರ ಒಪ್ಪಿಕೊಳ್ಳಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರವು ನ್ಯಾ. ಜೋಸೆಫ್ ಅವರ ನೇಮಕವನ್ನು ಸಾಧ್ಯವಾದಷ್ಟು ವಿಳಂಬಗೊಳಿಸುವ ಯೋಜನೆಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News