×
Ad

ಬಸ್ರೂರು ತುಳುವೇಶ್ವರನ ಮಡಿಲಲ್ಲಿ ‘ತುಳುನಾಡೋಚ್ಚಯ’

Update: 2018-08-02 20:07 IST

ಬಸ್ರೂರು, ಆ.2: ತುಳುನಾಡಿನ ಭವ್ಯ ಪರಂಪರೆಯ ಪ್ರದೇಶವನ್ನು ಹೊರ ಜಗತ್ತಿಗೆ ಸಾರಿ ಹೇಳುವ ಉದ್ದೇಶದಿಂದ ‘ತುಳುವೆರೆ ಆಯನೊ ಕೂಟ’ ನಡೆಸುತ್ತಿರುವ ‘ತುಳುನಾಡೋಚ್ಚಯ’ ಕಾರ್ಯಕ್ರಮವನ್ನು ಈ ಬಾರಿ ಕುಂದಾಪುರ ತಾಲೂಕಿನ ಬಸೂ್ರರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ.

ತುಳುವೆರೆ ಆಯನೊ ಕೂಟ ಕುಡ್ಲ ಮತ್ತು ಕಾಸರಗೋಡಿನ ಸದಸ್ಯರು ಬಸ್ರೂರಿನ ಬಿ.ಅಪ್ಪಣ್ಣ ಹೆಗ್ಡೆ ಹಾಗೂ ಡಾ.ವಾದಿರಾಜ್ ಭಟ್ ಅವರಲ್ಲಿ ಈ ಬಗ್ಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಪ್ಪಣ್ಣ ಹೆಗ್ಡೆ, ಇದಕ್ಕೆ ಮುನ್ನ ಹಲವು ಬಾರಿ ಇಲ್ಲಿ ತುಳು ಸಮ್ಮೇಳನವನ್ನು ಆಯೋಜಿಸಲು ಯೋಜಿಸಿದ್ದರೂ ಯಾವುದೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ಕಾಲಕೂಡಿ ಬಂದಿದ್ದು, ಸಮಸ್ತರನ್ನೂ ಸೇರಿಸಿ, ತುಳುನಾಡಿನಲ್ಲಿ ಜಾತಿ-ಮತ-ಭಾಷಾ ಸೌಹಾರ್ದತೆಯನ್ನು ಸಾರುವ ‘ತುಳುನಾಡೋಚ್ಚಯ-2018’ನ್ನು ಬಸ್ರೂರಿನಲ್ಲಿ ನಡೆಸಲು ಹೆಮ್ಮೆ ಪಡುವುದಾಗಿ ತಿಳಿಸಿದರು.

ಬಸ್ರೂರು ತುಳುನಾಡಿನ ಮತ್ತು ಕರ್ನಾಟಕದ ನಾಗರಿಕತೆಯ ಪ್ರಧಾನ ಮೈಲುಗಲ್ಲುಗಳಲ್ಲಿ ಒಂದಾದ ಪ್ರದೇಶ. ಪ್ರಾಚಿನ ತುಳುನಾಡಿನ ಬಂದರು, ವಾಣಿಜ್ಯ ಪ್ರದೇಶವಾದ ಬಸ್ರೂರು ಸುಮಾರು 300ಕ್ಕಿಂತಲೂ ಹೆಚ್ಚು ದೇಗುಲಗಳ ನೆಲೆವೀಡಾಗಿತ್ತು. ಸುತ್ತಲೂ ವಾರಾಹಿ ನದಿಯನ್ನು ಅಪ್ಪಿ ಕೊಂಡಿರುವ ಈ ಪ್ರದೇಶ ಹಲವು ಸಂಸ್ಕೃತಿಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ.

ಸರಕಾರ, ಪುರಾತತ್ವ ಇಲಾಖೆ ಹಾಗೂ ಅಕಾಡೆಮಿಗಳ ನಿರ್ಲಕ್ಷದಿಂದ ಇಲ್ಲಿ ಮಡಿಲೊಳಗಿದ್ದ ಇತಿಹಾಸವನ್ನು ಸಾರುವ ಸ್ಮಾರಕಗಳು ಮಣ್ಣುಪಾಲಾಗಿವೆ. ಶಾಸನಗಳು ಬಟ್ಟೆ ಒಗೆಯುವ ಕಲ್ಲುಗಳಾಗಿ, ಮೆಟ್ಟಲುಗಳಾಗಿ ನಾಮಾವಶೇಷ ಗೊಂಡಿವೆ. ಅಲ್ಲದೆ ತುಳುನಾಡಿನ ಹಾಗೂ ಭಾಷೆಯ ಪ್ರತೀಕವಾದ ತುಳುವೇಶ್ವರನ ದೇಗುಲವು ಶಿಥಿಲಗೊಂಡರೂ, ಪ್ರಕೃತಿ ಶಕ್ತಿಯಿಂದ ಆಲದಮರ ದಿಂದಾವೃತವಾದ ಗರ್ಭಗುಡಿಯಲ್ಲಿದ್ದು ನ್ನ ಶಾಪಮೋಕ್ಷಕ್ಕಾಗಿ ಕಾಯುತ್ತಿದೆ.

ತುಳುವೆರೆ ಆಯನೊ ಕೂಟ ಕುಡ್ಲ ಇದರ ಪದಾಧಿಕಾರಿಗಳಾದ ದಯಾನಂದ ಕತ್ತಲ್‌ಸಾರ್, ಡಾ. ರಾಜೇಶ ಆಳ್ವ, ಆಶಾ ಶೆಟ್ಟಿ ಅತ್ತಾವರ, ಹರೀಶ್ ಶೆಟ್ಟಿ ಪಣಿಯೂರು, ಪ್ರಸಾದ್ ಎಸ್. ಕೊಂಚಾಡಿ, ನಾಗಾರಾಜ್ ಕುದ್ರೊಳಿ, ಭೂಷಣ್ ಕುಲಾಲ್, ರಕ್ಷಿತ್ ಕುಡುಪು, ರಾಧಿಕ ವಾಮಂಜೂರು, ಚೇತನ್ ಕುಮಾರ್ ಕುಲಶೇಖರ, ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News