×
Ad

‘ರೈತ ಮಿತ್ರ’ ನಶಿಸುತ್ತಿರುವ ಕೃಷಿ ಸಂಸ್ಕ್ರತಿಗೆ ಮರುಜೀವದ ಪ್ರಯತ್ನ

Update: 2018-08-02 20:08 IST

 ಉಡುಪಿ, ಆ.2: ಭಾರತದ ಜೀವನಾಡಿಯಾಗಿರುವ ಕೃಷಿ ಜೀವನದತ್ತ ಬೆನ್ನು ಹಾಕುತ್ತಿರುವ ಯುವಜನತೆ ಪಾಶ್ಚಾತ್ಯ ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿ ದ್ದಾರೆ. ಆದರೆ ಪರಂಪರಾಗತವಾಗಿ ಈ ದೇಶದಲ್ಲಿ ಬೆಳೆದು ಬಂದ ಮೂಲ ಉದ್ಯೋಗ ಕೃಷಿ ವಿನಾಶದತ್ತ ಸಾಗುತ್ತಿದೆ. ಕೃಷಿ ಭೂಮಿಗಳು ಕೈಗಾರಿಕೋದ್ಯಮಿಗಳ ಪಾಲಾಗುತ್ತಿವೆ. ಪರಿಣಾಮ ಪರಿಸರ ಮಾಲಿನ್ಯ ಹೆಚ್ಚಾಗಿ ಜಾಗತಿಕ ತಾಪಮಾನ ನಿಯಂತ್ರಣ ಮೀರಿ ಸಾಗುತ್ತಿದೆ. ಇದರಿಂದ ಕೃಷಿ ಭಾರತಕ್ಕೆ ಎಷ್ಟು ಅಗತ್ಯ ಎಂಬುದರ ಅರಿವಾಗುತ್ತದೆ ಎಂದು ರೋಟರಿ ಕ್ಲಬ್ ಉಡುಪಿ ರಾಯಲ್ಸ್ ಅಧ್ಯಕ್ಷ ರತ್ನಾಕರ್ ಇಂದ್ರಾಳಿ ಅಭಿಪ್ರಾಯ ಪಟ್ಟಿದ್ದಾರೆ.

ಅವರು ಉದ್ಯಾವರದ ಬೋಳಾರಗುಡ್ಡೆಯ ಕೋಟೆ ಸ್ವಾಮಿಲ್ ತೋಟ ಮಹೇಶ್ ಸುವರ್ಣಅವರ ಗದ್ದೆಯಲ್ಲಿ ನಟ್ಟಿ ಮಾಡುತ್ತಿರುವ ಮಹಿಳೆಯರಾದ ಸಂಕಿ ಪೂಜಾರ್ತಿ, ಯಮುನಾ ಸುವರ್ಣ, ವಸಂತಿ ಆಚಾರ್ತಿ, ಗುಲಾಬಿ ಪೂಜಾರ್ತಿ, ಮುಟ್ಟಿ ಮೂಲ್ಯ, ಪುಷ್ಪ ಪೂಜಾರ್ತಿ, ಶಾಂಭವಿ ಸುವರ್ಣ ಹಾಗು ನಾಗೇಶ್ ಇವರನ್ನು ಸನ್ಮಾನಿಸಿ ಮಾತನಾಡುತಿದ್ದರು.

ರೈತರಿಗೆ ತಾವು ಮಾಡುತ್ತಿರುವ ಕೆಲಸದ ಮಹತ್ವವನ್ನು ಸಮಾಜ ಗುರುತಿಸಿ ಕೃತಜ್ಞತೆ ಅರ್ಪಿಸಿದಾಗ ಅವರು ಪಟ್ಟ ಶ್ರಮಕ್ಕೆ ಸಾರ್ಥಕತೆಯ ಭಾವನೆ ಮೂಡುತ್ತದೆ. ಇದರಿಂದ ಇನ್ನಷ್ಟು ರೈತ ಸಮುದಾಯ ತಮ್ಮ ವೃತ್ತಿಯ ಬಗ್ಗೆ ಗೌರವ ಅಭಿಮಾನ ಬೆಳೆಸಿಕೊಳ್ಳುತ್ತಾರೆ ಎಂದರು.

 ಆದುದರಿಂದ ಕೃಷಿಕರನ್ನು ಗೌರವಿಸಿ ಅವರು ಪಡುತ್ತಿರುವ ಪರಿಶ್ರಮವನ್ನು ಗುರುತಿಸಿ ಸನ್ಮಾನಿಸಿ ಸಮಾಜಕ್ಕೆ ಒಂದು ಪ್ರಮುಖ ಸಂದೇಶವನ್ನು ನೀಡುವುದಕ್ಕಾಗಿ ‘ರೈತಮಿತ್ರ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರತ್ನಾಕರ್ ಇಂದ್ರಾಳಿ ಹೇಳಿದರು.

ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮಹೇಶ್ ಸುವರ್ಣ ಕಾರ್ಯಕ್ರಮವನ್ನು ಸಂಯೋಜಿಸಿದ್ದರು. ಸಂಸ್ಥಾಪಕ ಅಧ್ಯಕ್ಷ ತೇಜೇಶ್ವರ್ ರಾವ್, ಮಾಜಿ ವಲಯ ಸೇನಾನಿ ಕೆ.ಟಿ.ನಾಯ್ಕಾ, ಜಿ.ಎಸ್.ಶಂಕರ್ ಪೂಜಾರಿ, ಮಂಜುನಾಥ್ ಮಣಿಪಾಲ, ಗುರುಪ್ರಸಾದ್ ಪಾಲನ್, ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News