×
Ad

ಮಂಗಳೂರು: ಮೀನುಗಾರರ ಸಂಘದ ಮುಖಂಡರೊಂದಿಗೆ ಇಲಾಖಾಧಿಕಾರಿಗಳ ಸಭೆ

Update: 2018-08-02 20:15 IST

ಮಂಗಳೂರು, ಆ.2: ಪ್ರಸಕ್ತ ಸಾಲಿನ ಮೀನುಗಾರಿಕೆ ಬುಧವಾರದಿಂದ ಆರಂಭವಾಗಿದ್ದು, ಮೀನುಗಾರರು ಎದುರಿಸುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಸಲುವಾಗಿ ಮೀನುಗಾರಿಕಾ ಇಲಾಖಾಧಿಕಾರಿಗಳು ಬಂದರು ದಕ್ಕೆಯಲ್ಲಿ ಗುರುವಾರ ಮೀನುಗಾರರ ಸಂಘದ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚಿಸಿದರು.

ಇಲಾಖೆಯ ಪ್ರಭಾರ ಉಪನಿರ್ದೇಶಕ ಮಹೇಶ್ ಕುಮಾರ್‌ರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿವಿಧ ಮೀನುಗಾರರ ಸಂಘದ ಮುಖಂಡರು ಹಲವು ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದರು. ಸಮುದ್ರವನ್ನು ತ್ಯಾಜ್ಯಮುಕ್ತಗೊಳಿಸಿ ಮೀನು ಸಂತತಿಯ ಸಂರಕ್ಷಣೆಯ ನಿಟ್ಟಿನಲ್ಲಿ ಯಾಂತ್ರೀಕೃತ ದೋಣಿಗಳಲ್ಲಿ ಕಸದ ತೊಟ್ಟಿ ಅಳವಡಿಸಲು ಅಧಿಕಾರಿಗಳು ಸೂಚಿಸಿದರಲ್ಲದೆ, ಸರಕಾರದ ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲು ಮನವಿ ಮಾಡಿದರು.

ಮೀನುಗಾರರು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮುದ್ರದಲ್ಲಿ ಎಸೆಯದೆ ಕಸದ ತೊಟ್ಟಿಯಲ್ಲಿ ಸಂಗ್ರಹಿಸಿ ತೀರಕ್ಕೆ ಬಂದ ನಂತರ ಸೂಕ್ತವಾಗಿ ವಿಲೇಗೊಳಿಸುವ ಬಗ್ಗೆ ಎಲ್ಲಾ ದೋಣಿಗಳ ಮಾಲಕರು ಸಹಕರಿಸಬೇಕು ಎಂದು ಮಹೇಶ್ ಕುಮಾರ್ ಸೂಚಿಸಿದರು. ಮತ್ಸ್ಯ ಸಂಪನ್ಮೂಲದ ರಕ್ಷಣೆಗಾಗಿ ಹಾಗೂ ಸಾಂಪ್ರದಾಯಿಕ ಮೀನುಗಾರರ ಹಿತರಕ್ಷಣೆಗಾಗಿ ಎಲ್ಲಾ ಟ್ರಾಲ್ ಬಲೆಗಳಲ್ಲಿ 35 ಎಂಎಂ ಅಳತೆಯ ಸ್ಕ್ವೇರ್ ಮೆಶ್ ಕಾಡ್ ಎಂಡ್ ಉಪಯೋಗಿಸುವುದನ್ನು ಕಡ್ಡಾಯಗೊಳಿಸಲಾಗಿದೆ. 10 ಸಾವಿರ ರೂ. ವೌಲ್ಯದ ಈ ಬಲೆಯನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಇದರಿಂದ ಮೀನುಗಳ ಸಂತತಿಯ ರಕ್ಷಣೆಯೂ ಇರುವುದರಿಂದ ಮೀನುಗಾರರು ಈ ಆದೇಶವನ್ನು ಪಾಲಿಸಬೇಕು ಎಂದು ಮಹೇಶ್ ಕುಮಾರ್ ತಿಳಿಸಿದರು.

ಪಾರ್ಕಿಂಗ್ ಕಟ್ಟುನಿಟ್ಟು: ಹೊರರಾಜ್ಯದಿಂದ ಮೀನುಗಳನ್ನು ಹೇರಿಕೊಂಡು ಬರುವ ಲಾರಿಗಳು ಮೀನುಗಳನ್ನು ಖಾಲಿ ಮಾಡಿದ ಬಳಿಕವೂ ದಕ್ಕೆಯಲ್ಲಿ ಠಿಕ್ಕಾಣಿ ಹೂಡುತ್ತದೆ. ಇದು ಸಂಚಾರಕ್ಕೆ ತೊಂದರೆಯಾಗಲಿದೆ. ಹಾಗಾಗಿ ಪಾರ್ಕಿಂಗ್ ಸಮಸ್ಯೆಯನ್ನು ನೀಗಿಸಲು ಮೀನುಗಾರರು ಸಹಕರಿಸಬೇಕು ಎಂದು ಅಧಿಕಾರಿಗಳು ಮನವಿ ಮಾಡಿದರು.

ಆರ್‌ಸಿ ಇಲ್ಲದ ಕೆಲವು ಬೋಟ್‌ಗಳಿಗೆ ಟ್ಯಾಂಕರ್‌ಗಳಲ್ಲಿ ಡೀಸೆಲ್ ತುಂಬಿಸಿ ತಂದು ಸರಬರಾಜು ಮಾಡಲಾಗುತ್ತದೆ. ಈ ಅನಧಿಕೃತ ಬೋಟ್ ಯಾನಕ್ಕೆ ತಡೆಯೊಡ್ಡಬೇಕು ಮೀನುಗಾರರ ಸಂಘದ ಮುಖಂಡರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಜರುಗಿಸುವು ದಾಗಿ ತಿಳಿಸಿದರು.

ಮೀನುಗಾರಿಕೆಗೆ ತೆರಳುವ ಮೀನುಗಾರರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಎಲ್ಲಾ ಮಾಲಕರು ನೀಡಬೇಕು. ಅಲ್ಲದೆ ಜೀವರಕ್ಷಕ ಕವಚ ಧರಿಸಬೇಕು ಎಂದು ಅಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಇಲಾಖೆಯ ಸಹಾಯಕ ನಿರ್ದೇಶಕಿ ಮಂಜುಳಾ, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಅಮಾನುಲ್ಲಾ, ಗಂಗಿರೆಡ್ಡಿ, ವಿವಿಧ ಮೀನುಗಾರರ ಸಂಘದ ಮುಖಂಡರು ನಿತಿನ್ ಕುಮಾರ್, ಮೋಹನ್ ಬೆಂಗರೆ, ಅಲಿ ಹಸನ್, ಸುಭಾಷ್ ಕಾಂಚನ್, ಸುನೀಲ್, ಅಶ್ರಫ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News