×
Ad

ಅಕ್ರಮ ಗಣಿಗಾರಿಕೆ: ಕ್ರಿಮಿನಲ್ ಪ್ರಕರಣ ದಾಖಲಿಸಲು ಹರಿಕೃಷ್ಣ ಬಂಟ್ವಾಳ ಆಗ್ರಹ

Update: 2018-08-02 20:17 IST

ಮಂಗಳೂರು, ಆ.2: ಬಂಟ್ವಾಳ ತಾಲೂಕಿನ ಕಾವಳ ಮುಡೂರು ಗ್ರಾಮದ ಸಂ.ನಂ 164-2 ಮತ್ತು 172-2 ಪಿ1 ಕೊಡ್ಯಮಲೆ ರಕ್ಷಿತಾರಣ್ಯದಲ್ಲಿ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿಸಿಕೊಂಡಿರುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಹಾಗೂ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಬೇಕು ಎಂದು ದ.ಕ. ಜಿಲ್ಲಾ ಬಿಜೆಪಿ ವಕ್ತಾರ ಹರಿಕೃಷ್ಣ ಬಂಟ್ವಾಳ ಆಗ್ರಹಿಸಿದ್ದಾರೆ.

ದ.ಕ.ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು ಕೊಡ್ಯಮಲೆಯಲ್ಲಿ ಜಿಪಂ ಸದಸ್ಯರೊಬ್ಬರು ರಾಜ್ಯ ಸರಕಾರದ ನೆರಳಿನಲ್ಲಿ ನಿರಂತರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದಾರೆ.ಹೈಕೋರ್ಟ್ ಜುಲೈ 4ರಂದು ಹೊರಡಿಸಿದ ಮಧ್ಯಂತರ ಆದೇಶದಂತೆ ಗಣಿಗಾರಿಕೆಯನ್ನು ತಾತ್ಕಾಲಿಕ ವಾಗಿ ಸ್ಥಗಿತಗೊಳಿಸಲಾಗಿದೆ. ಈಗ ಸ.ನಂ 268-56ರಲ್ಲಿ ಜಮೀನು ಖರೀದಿಸಿ ಅದರಲ್ಲಿ ಗಣಿಗಾರಿಕೆ ಮತ್ತು ಜಲ್ಲಿ ಕ್ರಷರ್ ಇರುವಂತೆ ದಾಖಲೆ ಸೃಷ್ಠಿಸಲಾಗಿದೆ. ಸರಕಾರಿ ಜಮೀನಿನಲ್ಲಿ ನಡೆಯುವ ಅಕ್ರಮ ಗಣಿಗಾರಿಕೆಯಲ್ಲಿ ಕಂದಾಯ, ಪರಿಸರ ಹಾಗೂ ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿ ಗಳು ಕೂಡಾ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.

ಸುಮಾರು 200 ಕೋ.ರೂ. ಮೌಲ್ಯದ ಸಾರ್ವಜನಿಕ ಆಸ್ತಿಯನ್ನು ಕೊಳ್ಳೆ ಹೊಡೆಯಲಾಗಿದೆ. ಕೃತ್ಯದಲ್ಲಿ ಭಾಗಿಯಾಗಿರುವ ವ್ಯಕ್ತಿಯ ಮೇಲೆ ಸೆಕ್ಷನ್ 379ರ ಪ್ರಕಾರ ಕೇಸು ದಾಖಲು ಮಾಡಬೇಕು ಎಂದ ಹರಿಕೃಷ್ಣ ಬಂಟ್ವಾಳ್ ಸಂಸದ ನಳಿನ್‌ಕುಮಾರ್ ನೇತೃತ್ವದಲ್ಲಿ ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡಲಾ ಗುವುದು ಎಂದರು.

ಪಂಪುವೆಲ್‌ನಲ್ಲಿ ಬುಧವಾರ ನಡೆದ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ ಸಂಸದರ ವಿರುದ್ಧ ಆರೋಪ ಹೊರಿಸಿದ್ದಾರೆ. ಕಳೆದ ನಾಲ್ಕು ವರ್ಷಗಳಲ್ಲಿ ನಳಿನ್ ಕುಮಾರ್ ಜಿಲ್ಲೆಗೆ ಬೇರೆ ಬೇರೆ ಯೋಜನೆಗಳ ಮೂಲಕ 14,000 ಕೋ.ರೂ. ಅನುದಾನ ಒದಗಿಸಿದ್ದಾರೆ. ಕಾಂಗ್ರೆಸ್ ನಾಯಕರ ಕಂಪೆನಿಗೆ ಗುತ್ತಿಗೆ ಕೊಟ್ಟು ಚತುಷ್ಪಥ ಕಾಮಗಾರಿಯಲ್ಲಿ ಕಮಿಷನ್ ಪಡೆದಿರುವವರು ಕಾಂಗ್ರೆಸಿಗರು. ಅವರೇ ಕಾಮಗಾರಿಯ ವಿಳಂಬ ಮತ್ತು ಕಳಪೆಗೆ ಕಾರಣರು ಎಂದು ಹರಿಕೃಷ್ಣ ದೂರಿದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಗಣೇಶ ಹೊಸಬೆಟ್ಟು, ಜಿತೇಂದ್ರ ಕೊಟ್ಟಾರಿ, ಸಂಜಯ ಪ್ರಭು ಉಪಸ್ಥಿತರರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News