ಪ್ಲೀಸ್ ನನ್ನ ಮಗನನ್ನು ಹುಡುಕಿಕೊಡಿ: ತಂದೆಯ ಅಳಲು
ಮಂಗಳೂರು, ಆ.2: ಪ್ಲೀಸ್ ನನ್ನ ಮಗನನ್ನು ಹುಡುಕಿಕೊಡಿ. ಜುಲೈ 27ರಂದು ನಮ್ಮ ಜತೆಗಿದ್ದ ಮಗ ನಾಪತ್ತೆಯಾಗಿದ್ದು, ಈವರೆಗೂ ಆತನ ಯಾವುದೇ ರೀತಿಯ ಸುಳಿವು ದೊರಕದೆ ನಾವು ಕಂಗಾಲಾಗಿದ್ದೇವೆ. ಆತನನ್ನು ಹುಡುಕಿಕೊಡಿ’’ ಎಂದು ಪಶ್ಚಿಮ ಬಂಗಾಲದ ದೇಬ್ ಕುಮಾರ್ ಡೇ ಅಳಲು ತೋಡಿಕೊಂಡಿದ್ದಾರೆ.
ಪಶ್ಚಿಮ ಬಂಗಾಲದ ನಿವಾಸಿಯಾಗಿರುವ ದೇಬ್ ಕಮಾರ್‌ರವರ ಅವಳಿ ಮಕ್ಕಳಲ್ಲಿ ಓರ್ವನಾದ ಅಭಿಜಿತ್ ಡೇ ಜುಲೈ 27ರಂದು ಕೂಳೂರು ಬಳಿಯಿಂದ ಅಚಾನಕ್ಕಾಗಿ ನಾಪತ್ತೆಯಾಗಿದ್ದರು.
22ರ ಹರೆಯದ ಅಭಿಜಿತ್ ಡೇ ಮಣಿಪಾಲದಲ್ಲಿ ಎಂಕಾಂ ಶಿಕ್ಷಣ ಮುಂದವರಿಸಲು ದಾಖಲಾತಿ ಪಡೆಯಲು ಜುಲೈ 25ರಂದು ಮಂಗಳೂರಿಗೆ ಆಗಮಿಸಿದ್ದರು ಎನ್ನಲಾಗಿದೆ. ಎರಡು ದಿನಗಳ ಬಳಿಕ ಅಂದರೆ ಜುಲೈ 27ರಂದು ಆತನ ಅವಳಿ ಸಹೋದರ ಹಾಗೂ ತಂದೆ ದೇಬ್ ಕುಮಾರ್ ಡೇ ವಿಮಾನದ ಮೂಲಕ ಮಂಗಳೂರಿಗೆ ಆಗಮಿಸಿದ್ದರು.
ವಿಮಾನ ನಿಲ್ದಾಣದಲ್ಲಿ ತಂದೆ ಹಾಗೂ ಸಹೋದರನ್ನು ಬರಮಾಡಿಕೊಂಡು ಮಣಿಪಾಲಕ್ಕೆ ತೆರಳುವುದಾಗಿ ಬಜ್ಪೆ ವಿಮಾನ ನಿಲ್ದಾಣದಿಂದ ಟ್ಯಾಕ್ಸಿ ಮೂಲಕ ಸಂಜೆ 4.20ಕ್ಕೆ ಮಣಿಪಾಲಕ್ಕೆ ಹೋಗುತ್ತಿದ್ದರು. ಕೂಳೂರಿನಲ್ಲಿ ಕಾಫಿ ಕುಡಿಯಲು ಟ್ಯಾಕ್ಸಿ ನಿಲ್ಲಿಸಿದ್ದರು. ಕಾಫಿ ಕುಡಿದು ಹೊಟೇಲ್‌ನಿಂದ ಅಭಿಜಿತ್ ಮೊದಲು ಹೊರಬಂದಾತ ಬಳಿಕ ನಾಪತ್ತೆಯಾಗಿದ್ದ. ಪರಿಸರದಲ್ಲಿ ಆತನನ್ನು ಹುಡುಕಾಟ ನಡೆಸಿ ಸಿಗದ ಹಿನ್ನೆಲೆಯಲ್ಲಿ ಕಾವೂರು ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.
‘‘27ರಂದು ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಭಿಜಿತ್ ಜತೆ ನಾವು ಟ್ಯಾಕ್ಸಿ ಮೂಲಕ ಮಣಿಪಾಲಕ್ಕೆ ಹೊರಟಿದ್ದೆವು. ಕೂಳೂರು ಎಂಬಲ್ಲಿ ನಾವು ಚಹಾ ಕುಡಿಯಲು ಹೊಟೇಲ್‌ಗೆ ಹೋಗಿದ್ದೆವು. ಅಲ್ಲಿಂದ ಅಭಿಜಿತ್ ಕಾಣೆಯಾಗಿದ್ದಾನೆ. ಪೊಲೀಸರು ಹಲವಾರು ರೀತಿಯಲ್ಲಿ ತನಿಖೆ ನಡೆಸುತ್ತಿದ್ದಾರೆ. ಸಿಸಿ ಕ್ಯಾಮಾರಗಳನ್ನೂ ಅವರು ಪರಿಶೀಲಿಸಿದ್ದಾರೆ. ಆದರೆ ಇದುವರೆಗೂ ಅಭಿಜಿತ್ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ’’ ಎಂದು ದೇಬ್ ಕುಮಾರ್ ಕಣ್ಣೀರಿಟಿದ್ದಾರೆ.
ಕಳೆದ ರವಿವಾರದಿಂದ ಅಭಿಜಿತ್ ಡೇ ಬಳಸುತ್ತಿದ್ದ ಮೊಬೈಲ್, ಇಂಟರ್‌ರ್ನೆಟ್, ಎಂಟಿಎಂ ಕಾರ್ಡ್‌ಗಳೂ ಸ್ಥಗಿತಗೊಂಡಿವೆ. ಸಿಸಿ ಕ್ಯಾಮರಾಗಳನ್ನು ಪರಿಶೀಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ.
ಈ ನಡುವೆ ಆತ 25ರಂದು ಮಂಗಳೂರಿಗೆ ಬಂದು ಮಣಿಪಾಲಕ್ಕೆ ಕಾಲೇಜು ಪ್ರವೇಶಕ್ಕಾಗಿ ಹೋಗಿರುವ ಕುರಿತಂತೆ ಕಾಲೇಜಿನಲ್ಲಿಯೂ ಪೊಲೀಸರು ಪರಿಶೀಲಿಸಿದ್ದಾರೆ. ಆದರೆ ಕಾಲೇಜಿನಲ್ಲಿ ಆತ ಹೋಗಿರುವ ಬಗ್ಗೆ ಯಾವುದೇ ದಾಖಲೆಗಳು ಕೂಡಾ ಲಭ್ಯವಾಗಿಲ್ಲ.
ಸಿಗದ ಸುಳಿವು: ಪೊಲೀಸರಿಗೆ ಸವಾಲಾದ ಪ್ರಕರಣ !
ಯುವಕನ ಮನೆಯವರು ಹೇಳುತ್ತಿರುವಂತೆಯೇ ಉನ್ನತ ಶಿಕ್ಷಣದ ಉದ್ದೇಶದಿಂದ ಅಭಿಜಿತ್ ಮಂಗಳೂರಿಗೆ ಆಗಮಿಸಿದ್ದು, ಆತನನ್ನು ಅಪಹರಣ ಮಾಡಿರುವ ಸಾಧ್ಯತೆಗಳ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ಅಪಹರಣ ಯಾವ ಉದ್ದೇಶಕ್ಕಾಗಿ ನಡೆದಿರಬಹುದು ಎಂಬ ಪ್ರಶ್ನೆಯೂ ಉದ್ಭವಿಸಿದೆ. ಒಟ್ಟಿನಲ್ಲಿ ಪ್ರಕರಣ ಪೊಲೀಸರ ಪಾಲಿಗೂ ಜಟಿಲ ಹಾಗೂ ಸವಾಲಿನದ್ದಾಗಿದೆ.
ಕೂಳೂರು ಜಂಕ್ಷನ್‌ನಲ್ಲಿ ಇರುವ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದು, ಅಭಿಜಿತ್‌ನ ಚಲನ ವಲನ ಸೆರೆಯಾಗಿದೆ. ಆದರೆ ಆತ ಯಾವ ವಾಹನ ಹತ್ತಿ ಎಲ್ಲಿಗೆ ಹೋಗಿದ್ದಾನೆ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿದೆ. ಎಟಿಎಂನಿಂದ ಹಣ ಡ್ರಾ ಆಗಿಲ್ಲ. ಆತನ ಕೈಯ್ಯಲ್ಲಿದ್ದ ಲ್ಯಾಪ್‌ಟಾಪ್ ಭಾನುವಾರ ಮಧ್ಯಾಹ್ನ ಲಾಗ್‌ಇನ್ ಆಗಿರುವುದು ಪೊಲೀಸರ ಗಮನಕ್ಕೆ ಬಂದಿದೆ. ಮಣಿಪಾಲದಲ್ಲೂ ಪೊಲೀಸರು ಹುಡುಕಾಟ ನಡೆಸಿದ್ದಾರಾದರೂ ಯಾವುದೇ ಕುರುಹು ಪತ್ತೆಯಾಗಿಲ್ಲ.
ತಂದೆ ದೇವ್‌ಕುಮಾರ್ ಹಾಗೂ ಸಹೋದರ ಮಂಗಳೂರಿನಲ್ಲಿದ್ದು, ಪೊಲೀಸರಿಗೆ ಸಹಕಾರ ನೀಡುತ್ತಿದ್ದಾರೆ. ದೇವಕುಮಾರ್ ಡೇ ಅವರ ಅವಳಿ ಜವಳಿ ಮಕ್ಕಳಲ್ಲಿ ಅಭಿಜಿತ್ ಡೇ ಓರ್ವನಾಗಿದ್ದು, ಈತ ಎರಡು ದಿನ ಮೊದಲು ಮಂಗಳೂರಿಗೆ ಬಂದು ಬಳಿಕ ತಂದೆ ಹಾಗೂ ಸಹೋದರನನ್ನು ಕರೆಸಿದ್ದಾನೆ. ಈ ಸಂದರ್ಭ ಆತ ಯಾರನ್ನು ಭೇಟಿಯಾಗಿದ್ದಾನೆ, ಎಲ್ಲಿ ಹೋಗಿದ್ದಾನೆ, ಎಲ್ಲಿ ವಾಸ್ತವ್ಯದಲ್ಲಿದ್ದ ಎಂಬ ಬಗ್ಗೆಯೂ ಮಾಹಿತಿ ಲಭ್ಯವಾಗಿಲ್ಲ.
ಪೊಲೀಸರಿಗೆ ಇದೊಂದು ಸವಾಲಿನ ಪ್ರಕರಣವಾಗಿದ್ದು, ಹಲವು ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.
ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯಲ್ಲೂ ಶ್ರಮ ವಹಿಸಿ ವಿದ್ಯಾರ್ಥಿಯನ್ನು ಹುಡುಕಲು ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿ ನಾಪತ್ತೆಯಾದ ಸ್ಥಳದ ಸಮೀಪದ ಸಿಸಿಟಿವಿಗಳ ಫೂಟೇಜ್‌ಗಳನ್ನು ಪರೀಕ್ಷಿಸಲಾಗಿದೆ. ಮಣಿಪಾಲ ಕಾಲೇಜಿನಲ್ಲಿ ಅಡ್ಮಿಶನ್ ಪಡೆದಿರುವುದಾಗಿ ವಿದ್ಯಾರ್ಥಿಯು ಪೋಷಕರ ಬಳಿ ತಿಳಿಸಿದ್ದ ಎನ್ನಲಾಗಿತ್ತು. ಆದರೆ ಪೊಲೀಸರು ಕಾಲೇಜಿಗೆ ಭೇಟಿ ನೀಡಿದ ವೇಳೆ ವಿದ್ಯಾರ್ಥಿ ಸುಳ್ಳು ಹೇಳಿರುವುದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಯ ಮೊಬೈಲ್ ನಂ. ಸ್ಥಗಿತಗೊಂಡಿದೆ.
- ಉಮಾ ಪ್ರಶಾಂತ್,
ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ