ಕೆಎಸ್‌ಎಫ್‌ಸಿಗೆ 25.55 ಕೋಟಿ ರೂ. ನಿವ್ವಳ ಲಾಭ
ಮಂಗಳೂರು, ಆ.2: ಕಳೆದ ವರ್ಷದಲ್ಲಿ ಜಾರಿಗೊಂಡ ಸರಕು ಸೇವಾ ತೆರಿಗೆ ಹಾಗೂ ಅನಾಣ್ಯೀಕರಣಗಳ ಪರಿಣಾಮಗಳ ನಡುವೆಯೂ ರಾಜ್ಯ ಹಣಕಾಸು ಸಂಸ್ಥೆಯು ಧನಾತ್ಮಕ ಬೆಳವಣಿಗೆಯನ್ನು ದಾಖಲಿಸಿದೆ. ಸಂಸ್ಥೆಯು ತನ್ನ ಹಣಕಾಸಿನ ಸ್ಥಿತಿಗತಿಗಳನ್ನು ಕ್ರೋಡೀಕರಿಸಿ ಮಾ.2018ರ ಅಂತ್ಯದವರೆಗೆ ಒಟ್ಟು 25.55 ಕೋಟಿ ರೂ. ನಿವ್ವಳ ಲಾಭವನ್ನು ದಾಖಲಿಸಿದೆ.
ಸಂಸ್ಥೆಯು ಮಂಜೂರಾತಿಯಲ್ಲಿ ಅಲ್ಪ ಪ್ರಮಾಣದ ಸುಧಾರಣೆಯನ್ನು ಸಾಧಿಸಿದ್ದರೂ ರಾಜ್ಯ ಸರಕಾರದ ನೆರವಿನಿಂದಾಗಿ, 842.13 ಕೋಟಿ ರೂ. ಮಂಜೂರಾತಿ, 561.21 ಕೋಟಿ ರೂ. ವಿತರಣೆ ಹಾಗೂ 781.91 ಕೋಟಿ ರೂ. ವಸೂಲಾತಿಯನ್ನು ಮಾಡಿದೆ.
ಸಂಸ್ಥೆಯ ವತಿಯಿಂದ ಮಹಿಳಾ ಉದ್ದಿಮೆದಾರರಿಗೆ 200 ಕೋಟಿ ರೂ. ಹಣಕಾಸಿನ ನೆರವನ್ನು ನೀಡಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಉದ್ದಿಮೆದಾರರಿಗೆ 269 ಕೋಟಿ ರೂ. ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರಿಗೆ 77.95 ಕೋಟಿ ರೂ. ಹಣಕಾಸಿನ ನೆರವನ್ನು ನೀಡಿದೆ.
2018-19ನೇ ಸಾಲಿನ ಮುನ್ನೋಟ: ಪ್ರಸಕ್ತ ವರ್ಷದಲ್ಲಿ ಸಂಸ್ಥೆಯು ತನ್ನ ಕಾರ್ಯಾಚರಣೆಯ ಮಂಜೂರಾತಿಯಲ್ಲಿ ಅಲ್ಪ ಪ್ರಮಾಣದ ಸುಧಾರಣೆಯನ್ನು ಕಂಡಿದೆ. ಆದಾಗ್ಯೂ, ಮುಂಬರುವ ವರ್ಷಗಳಲ್ಲೂ, ರಾಜ್ಯದ ಪೂರಕ ಆರ್ಥಿಕತೆಯ ಹಿನ್ನೆಲೆಯಲ್ಲಿ ಹಾಗೂ ಮೊದಲ ಪೀಳಿಗೆ ಉದ್ದಿಮೆದಾರರು, ಮಹಿಳಾ ಉದ್ದಿಮೆದಾರರು ಮತ್ತು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಉದ್ದಿಮೆದಾರರಿಗೆ ಹಾಲಿ ಕರ್ನಾಟಕ ಸರಕಾರದ ಬಡ್ಡಿ ಸಹಾಯಧನ ಯೋಜನೆಗಳಲ್ಲಿ, ಸಾಲದ ಮಿತಿ ಮತ್ತು ಸಾಲ ಮರುಪಾವತಿ ಅವಧಿಯಲ್ಲಿ ವಿಸ್ತರಣೆಯನ್ನು ಮಾಡಿರುವುದರಿಂದ, ಸಂಸ್ಥೆಯು ಧನಾತ್ಮಕ ಬೆಳವಣಿಗೆಯನ್ನು ತೋರುವ ಭರವಸೆಯನ್ನು ಹೊಂದಿದೆ.
ಹಾಲಿ ಉದ್ದಿಮೆದಾರರಿಗೆ ವಿಶೇಷ ಬಡ್ಡಿ ಯೋಜನೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಗ್ರಾಹಕರನ್ನು ಆಕರ್ಷಿಸುವ ನಿರೀಕ್ಷೆಯಿದೆ. ಪ್ರಸಕ್ತ ಸಾಲಿನಲ್ಲಿ ‘ಪೂರಕ ಭದ್ರತಾ ಖಾತರಿ ಯೋಜನೆ’ ಹಾಗೂ ಜವಳಿ ಉದ್ದಿಮೆಗಳನ್ನು ಸ್ಥಾಪಿಸಲು ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗದ ಉದ್ದಿಮೆದಾರರಿಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಿರುವುದು ಸಹ ಸಂಸ್ಥೆಯು ತನ್ನ ಕಾರ್ಯಾಚರಣೆಯಲ್ಲಿ ಮಹತ್ವದ ತಿರುವನ್ನು ಪಡೆಯುವಲ್ಲಿ ಸಹಕಾರಿಯಾಗಲಿದೆ.
ಸಂಸ್ಥೆಯು ಸದರಿ ಸಾಲಿನಲ್ಲಿ ತನ್ನ ವಜ್ರೋತ್ಸವವನ್ನು ಮೈಲಿಗಲ್ಲಾಗಿ ಗುರುತಿಸಲು, ಎಲ್ಲ ಕ್ಷೇತ್ರಗಳಲ್ಲೂ ಅದ್ಭುತ ಬೆಳವಣಿಗೆಯನ್ನು ಸಾಧಿಸುವ ಭರವಸೆಯನ್ನು ಹೊಂದಿದೆ. 2018-19ನ್ನು ‘ವಿತರಣೆಯ ವರ್ಷ’ ಎಂದು ಘೋಷಿಸುವುದರೊಂದಿಗೆ ಬದ್ಧತೆಯ ನೆರವೇರಿಕೆಯಲ್ಲಿ ಬೆಳವಣಿಗೆಯನ್ನು ಕಾಣುವ ಗುರಿಯನ್ನು ಹೊಂದಿದೆ. ಅಲ್ಲದೆ, ಪ್ರಸ್ತುತ ವರ್ಷವನ್ನು ‘ವಸೂಲಾಗದ ಸಾಲಗಳ ವಿಶ್ಲೇಷಣಾ ವರ್ಷ’ ಎಂದು ಸಹ ಘೋಷಿಸಿ ಸಂಸ್ಥೆಯ ಉತ್ತಮವಲ್ಲದ ಸಾಲಗಳ ಪೋರ್ಟ್‌ಫೊಲಿಯೊ (ಅಧಿಕಾರ ಕ್ಷೇತ್ರ)ವನ್ನು ಶುದ್ಧೀಕರಿಸುವ ಕಾರ್ಯಕ್ಕೆ ಪ್ರಚೋದನೆಯನ್ನು ನೀಡಲಾಗಿದೆ.
2018-19ನೇ ಸಾಲಿನ ರಾಜ್ಯ ಸರಕಾರದ ಆಯವ್ಯಯದಲ್ಲಿ ಪ್ರಕಟಿಸಿರುವಂತೆ ಕೆಎಸ್‌ಎಫ್‌ಸಿ ಮುಖಾಂತರ ಸಾಲ ಪಡೆಯುವ ಅತಿಸಣ್ಣ ಮತ್ತು ಸಣ್ಣ ಪ್ರಮಾಣದ ತಯಾರಿಕಾ ಕೈಗಾರಿಕಾ ಘಟಕಗಳ ಉದ್ದಿಮೆದಾರರಿಗೆ ಸಾಲದ ಮೊದಲ ಕಂತನ್ನು ಬಿಡುಗಡೆ ಮಾಡಿದ ದಿನಾಂಕದಿಂದ 5(ಐದು) ವರ್ಷಗಳ ಅವಧಿಗೆ ಶೇ.10ರಷ್ಟು ಬಡ್ಡಿ ಸಹಾಯಧನದ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರಕಟನೆ ತಿಳಿಸಿದೆ.