ರಶ್ಯದಿಂದ ಶಸ್ತ್ರ ಖರೀದಿಸಿದರೆ ಭಾರತಕ್ಕೆ ವಿನಾಯಿತಿ

Update: 2018-08-02 15:30 GMT

ವಾಶಿಂಗ್ಟನ್, ಆ. 2: ಭಾರತ ರಶ್ಯದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡುವ ರಕ್ಷಣಾ ವೆಚ್ಚ ಮಸೂದೆಯನ್ನು ಅಮೆರಿಕ ಸೆನೆಟ್ ಬುಧವಾರ ಅಂಗೀಕರಿಸಿದೆ.

ರಶ್ಯದೊಂದಿಗೆ ‘ಗಣನೀಯ ಪ್ರಮಾಣದಲ್ಲಿ’ ವ್ಯವಹಾರ ನಡೆಸುವ ಭಾರತ ಮುಂತಾದ ದೇಶಗಳ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಲು ಅವಕಾಶ ನೀಡುವ ಕಾನೂನಿಗೆ ತಿದ್ದುಪಡಿ ಮಾಡುವ ಪ್ರಸ್ತಾಪವನ್ನು ಈ ಮಸೂದೆಯು ಹೊಂದಿದೆ.

ಈ ಹಿನ್ನೆಲೆಯಲ್ಲಿ, ಭಾರತ ರಶ್ಯದಿಂದ ಖರೀದಿಸಲು ಉದ್ದೇಶಿಸಿರುವ 5 ಎಸ್-400 ವಾಯು ರಕ್ಷಣಾ ವ್ಯವಸ್ಥೆಗಳ ಖರೀದಿಯಲ್ಲಿ ಮುಂದುವರಿಯಬಹುದಾಗಿದೆ.

ನ್ಯಾಶನಲ್ ಡಿಫೆನ್ಸ್ ಆಥರೈಸೇಶನ್ ಆ್ಯಕ್ಟ್ (ಎನ್‌ಡಿಎಎ) 2019 ಎಂಬುದಾಗಿ ಕರೆಯಲ್ಪಡುವ ಮಸೂದೆಯನ್ನು ಅಮೆರಿಕ ಸಂಸತ್ತಿನ ಇನ್ನೊಂದು ಸದನ ‘ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್’ ಈಗಾಗಲೇ ಅಂಗೀಕರಿಸಿದೆ. ಇನ್ನು ಮಸೂದೆಯನ್ನು ಸಹಿಹಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಕಳುಹಿಸಿಕೊಡಲಾಗುತ್ತದೆ.

ಈ ಮಸೂದೆಗೆ ಶ್ವೇತಭವನ ಈಗಾಗಲೇ ಬೆಂಬಲ ನೀಡಿರುವ ಹಿನ್ನೆಲೆಯಲ್ಲಿ, ಅವರು ಅದಕ್ಕೆ ತ್ವರಿತ ಗತಿಯಲ್ಲಿ ಸಹಿ ಹಾಕುವ ನಿರೀಕ್ಷೆಯಿದೆ.

‘‘ಈ ವರ್ಷದ ಎನ್‌ಡಿಎಎಯನ್ನು ದಾಖಲೆಯ ಅವಧಿಯಲ್ಲಿ ಅಂಗೀಕರಿಸಿದ ಆಡಳಿತ ಮತ್ತು ಪ್ರತಿಪಕ್ಷಗಳ ಎಲ್ಲ ಸದಸ್ಯರಿಗೆ ನಾನು ಋಣಿಯಾಗಿದ್ದೇನೆ. ನಮ್ಮ ಸೇನೆಗೆ ಸಿಗುತ್ತಿರುವ ಸರ್ವ ಪಕ್ಷಗಳ ಬೆಂಬಲವನ್ನು ಇದು ಸೂಚಿಸುತ್ತದೆ’’ ಎಂದು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಎನ್. ಮ್ಯಾಟಿಸ್ ಹೇಳಿಕೆಯೊಂದರಲ್ಲಿ ತಿಳಿಸಿದರು.

‘ಅಮೆರಿಕದ ಎದುರಾಳಿಗಳನ್ನು ದಿಗ್ಬಂಧನಗಳ ಮೂಲಕ ಎದುರಿಸುವ ಕಾಯ್ದೆ (ಸಿಎಎಟಿಎಸ್‌ಎ)’ಯ ಅಡಿಯಲ್ಲಿ ವಿಧಿಸಲಾಗುವ ಕೆಲವು ರಶ್ಯ-ಸಂಬಂಧಿ ದಿಗ್ಬಂಧನಗಳಿಂದ ಅಮೆರಿಕದ ಪ್ರಮುಖ ಭಾಗೀದಾರರು ಮತ್ತು ಮಿತ್ರದೇಶಗಳಿಗೆ ವಿನಾಯಿತಿ ನೀಡುವ ಮಸೂದೆಯ ಮಹತ್ವದ ಅಂಶಗಳನ್ನೂ ಅವರು ಹೇಳಿಕೆಯಲ್ಲಿ ಪ್ರಸ್ತಾಪಿಸಿದ್ದಾರೆ.

ಒಳಗೆ ಬಾಕಸ್

ಏನಿದು ಸಿಎಎಟಿಎಸ್‌ಎ?

2016ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಶ್ಯ ಹಸ್ತಕ್ಷೇಪ ನಡೆಸಿರುವುದಕ್ಕೆ ಪ್ರತಿಯಾಗಿ ಅದನ್ನು ಶಿಕ್ಷಿಸಲು 2017ರಲ್ಲಿ ‘ಅಮೆರಿಕದ ಎದುರಾಳಿಗಳನ್ನು ದಿಗ್ಬಂಧನಗಳ ಮೂಲಕ ಎದುರಿಸುವ ಕಾಯ್ದೆ (ಸಿಎಎಟಿಎಸ್‌ಎ)ಯನ್ನು ರೂಪಿಸಲಾಯಿತು ಹಾಗೂ 2018ರಲ್ಲಿ ಜಾರಿಗೊಳಿಸಲಾಯಿತು.

ಸೇನೆ ಮತ್ತು ಗುಪ್ತಚರ ಕ್ಷೇತ್ರಗಳಲ್ಲಿ ರಶ್ಯದೊಂದಿಗೆ ಇತರ ದೇಶಗಳು ‘ಗಣನೀಯ ವ್ಯವಹಾರ’ಗಳನ್ನು ನಡೆಸುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ. ರಶ್ಯದೊಂದಿಗೆ ವ್ಯವಹಾರಗಳನ್ನು ನಡೆಸುವ ದೇಶಗಳ ವಿರುದ್ಧ ದಿಗ್ಬಂಧನಗಳನ್ನು ವಿಧಿಸಲು ಇದು ಅಮೆರಿಕಕ್ಕೆ ಅವಕಾಶ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News