×
Ad

ಆ.15ರಂದು ಕಡಬ, ಮೂಡುಬಿದಿರೆ ತಾಲೂಕು ಉದ್ಘಾಟನೆ

Update: 2018-08-02 21:04 IST

ಮಂಗಳೂರು, ಆ.2: ನೂತನವಾಗಿ ಸ್ಥಾಪನೆಗೊಂಡಿರುವ ಕಡಬ ಹಾಗೂ ಮೂಡಬಿದಿರೆ ತಾಲೂಕುಗಳ ಉದ್ಘಾಟನೆಯನ್ನು ಆ.15ರಂದು ಹಮ್ಮಿಕೊಳ್ಳಲು ಉದ್ದೇಶಿಸಿದ್ದು, ಅಂದು ಬೆಳಗ್ಗೆ 10:30ಕ್ಕೆ ಕಡಬ ತಾಲೂಕು ಹಾಗೂ ಸಂಜೆ 4 ಗಂಟೆಗೆ ಮೂಡುಬಿದಿರೆ ತಾಲೂಕು ಉದ್ಘಾಟನೆಗೊಳ್ಳಲಿದೆ.

ಈ ಕುರಿತು ಅಧಿಕಾರಿಗಳ ಪೂರ್ವ ಸಿದ್ಧತಾ ಸಭೆ ಗುರುವಾರ ಅಪರ ಜಿಲ್ಲಾಧಿಕಾರಿ ಕುಮಾರ್ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಸರಕಾರದ ನಿರ್ದೇಶನದಂತೆ ತಾಲೂಕು ಮಟ್ಟದಲ್ಲಿ ಸ್ಥಾಪನೆಯಾಗಬೇಕಾದ ಎಲ್ಲ ಇಲಾಖೆಗಳ ಸರಕಾರಿ ಕಚೇರಿಗಳ ಸ್ಥಾಪನೆಗೆ ಆಯಾ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಈಗಿನಿಂದಲೇ ಸಿದ್ಧತೆ ಮಾಡಬೇಕು. ಇದಕ್ಕಾಗಿ ಸೂಕ್ತ ಕಚೇರಿಯನ್ನು ಹುಡುಕಬೇಕು. ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ಕಚೇರಿ ಸ್ಥಾಪಿಸಿ, ಮುಂದಿನ ದಿನಗಳಲ್ಲಿ ಕಚೇರಿ ಕಟ್ಟಡ ನಿರ್ಮಿಸಲು ಸೂಕ್ತ ಭೂಮಿ ಗುರುತಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಹೇಳಿದರು.

ಆಯಾ ಕಚೇರಿಗೆ ಅಧಿಕಾರಿ ಮತ್ತು ಸಿಬ್ಬಂದಿಯನ್ನು ನಿಯೋಜಿಸಬೇಕು. ಪೂರ್ಣ ಪ್ರಮಾಣದ ಅಧಿಕಾರಿ ಇಲ್ಲದಿದ್ದರೆ ಪ್ರಭಾರ ವ್ಯವಸ್ಥೆ ಮಾಡಬೇಕು. ಎಲ್ಲ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಈ ಬಗ್ಗೆ ತ್ವರಿತವಾಗಿ ಗಮನಹರಿಸಿ ಸಿದ್ಧತಾ ಕಾರ್ಯ ಕೈಗೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಹೇಳಿದರು.

ಈಗಾಗಲೇ ಕಡಬ ಮತ್ತು ಮೂಡಬಿದಿರೆಯಲ್ಲಿ ಮಿನಿವಿಧಾನಸೌಧ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಇದರಲ್ಲಿ ತಾಲೂಕು ಕಚೇರಿ, ಸರ್ವೇ ಇಲಾಖೆ, ಸಬ್‌ರಿಜಿಸ್ಟ್ರಾರ್ ಹಾಗೂ ಖಜಾನೆ ಇಲಾಖೆ ಇರಲಿದೆ ಎಂದು ಕುಮಾರ್ ತಿಳಿಸಿದರು.

ಕಡಬ ತಾಲೂಕು ಪುತ್ತೂರು ತಾಲೂಕಿನ 9 ಗ್ರಾಮ ಹಾಗೂ ಸುಳ್ಯ ತಾಲೂಕಿನ 7 ಗ್ರಾಮಗಳನ್ನು ಒಳಗೊಂಡಿದೆ. ಮೂಡಬಿದಿರೆ ತಾಲೂಕು ಮೂಡಬಿದಿರೆ ಹೋಬಳಿಯ ಎಲ್ಲ ಗ್ರಾಮಗಳನ್ನು ಒಳಗೊಂಡಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News