×
Ad

ಅಸ್ಸಾಂ ವಿಮಾನ ನಿಲ್ದಾಣದಲ್ಲಿ ತೃಣಮೂಲ ತಂಡಕ್ಕೆ ತಡೆ

Update: 2018-08-02 21:14 IST

ಸಿಲ್ಚಾರ್,ಆ.2: ಎನ್‌ಆರ್‌ಸಿ ಪಟ್ಟಿಯ ವಿರುದ್ಧ ಪ್ರಚಾರ ಕಾರ್ಯಕ್ಕಾಗಿ ಗುರುವಾರ ಸಿಲ್ಚಾರ್‌ಗೆ ಆಗಮಿಸಿದ್ದ ತೃಣಮೂಲ ಕಾಂಗ್ರೆಸ್ ಪಕ್ಷದ ಸಂಸದರ ತಂಡವನ್ನು ವಿಮಾನ ನಿಲ್ದಾಣದಲ್ಲಿಯೇ ತಡೆಯಲಾಗಿತ್ತು. ಮಹಿಳಾ ಪೊಲೀಸರು ತೃಣಮೂಲ ತಂಡದಲ್ಲಿದ್ದ ಮಹಿಳೆಯರನ್ನು ಅಟ್ಟಿಸಿಕೊಂಡು ಹೋಗುತ್ತಿರುವುದು ವೀಡಿಯೊ ತುಣುಕಿನಲ್ಲಿ ಕಂಡು ಬಂದಿದೆ.

 ಎಂಟು ಸದಸ್ಯರ ತಂಡವು ಸಿಲ್ಚಾರ್‌ನಲ್ಲಿ ಎನ್‌ಆರ್‌ಸಿ ವಿರುದ್ಧ ಭಾಷಣಗಳನ್ನು ಮಾಡಬೇಕಿತ್ತು. ಮಧ್ಯಾಹ್ನ 1:30ರ ಸುಮಾರಿಗೆ ತಂಡವು ಬಂದಿಳಿದಾಗ ವಿಮಾನ ನಿಲ್ದಾಣದಲ್ಲಿ ಭಾರೀ ಸಂಖ್ಯೆಯಲ್ಲಿ ಹಾಜರಿದ್ದ ಪೊಲೀಸರು ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಬುಧವಾರ ರಾತ್ರಿಯೇ ಬಹಿರಂಗ ಸಭೆಗಳನ್ನು ನಿಷೇಧಿಸಿರುವುದನ್ನು ಉಲ್ಲೇಖಿಸಿ ಅವರನ್ನು ಹೊರಕ್ಕೆ ಬಿಡಲು ನಿರಾಕರಿಸಿದ್ದರು.

ಈ ಸಂದರ್ಭ ಉಭಯತರ ನಡುವೆ ವಾಗ್ವಾದಗಳು ನಡೆದಿದ್ದು,ತನ್ನ ಸದಸ್ಯರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಸಂಸದೆ ಮಹುವಾ ಮೊಯಿತ್ರಾ ಅವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದು,ಮಹಿಳಾ ಪೊಲೀಸರು ಅವರ ಹಿಂದೆ ಓಡುತ್ತಿರುವುದು,ಇನ್ನೋರ್ವ ಸಂಸದೆಯನ್ನು ತಳ್ಳಿರುವುದು ಇವೆಲ್ಲ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಲಾದ ವೀಡಿಯೊದಲ್ಲಿ ದಾಖಲಾಗಿವೆ.

ನಮ್ಮ ಸದಸ್ಯರ ಮೇಲೆ ಹಲ್ಲೆ ನಡೆದಿದೆ. ಪೇಸ್‌ಮೇಕರ್ ಅಳವಡಿಸಿಕೊಂಡಿರುವ ಸಂಸದ ಸುಖೇಂದು ರಾಯ್ ಅವರನ್ನೂ ಬಿಟ್ಟಿಲ್ಲ ಎಂದು ತೃಣಮೂಲ ನಾಯಕ ಡೆರೆಕ್ ಓ’ಬ್ರಿಯಾನ್ ಅವರು ಅತ್ತ ದಿಲ್ಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಇದು ಸೂಪರ್ ತುರ್ತುಸ್ಥಿತಿಯಾಗಿದೆ. ಏನಾಗುತ್ತಿದೆ ದೇಶದಲ್ಲಿ ಎಂದು ಪ್ರಶ್ನಿಸಿದರು.

ತಂಡವು ಭಾಷಣ ಕಾರ್ಯಕ್ರಮವನ್ನು ರದ್ದುಗೊಳಿಸಿದ ಬಳಿಕ ತಾವು ಕೇವಲ ಜನರನ್ನು ಭೇಟಿಯಾಗುತ್ತೇವೆ ಎಂದು ಭರವಸೆ ನೀಡಿದರೂ ನಗರವನ್ನು ಪ್ರವೇಶಿಸಲು ಪೊಲೀಸರು ಅವಕಾಶ ನೀಡಲಿಲ್ಲ ಎಂದು ರಾಯ್ ಹೇಳಿದರು.

ತಂಡವನ್ನು ಕೋಲ್ಕತಾಗೆ ವಾಪಸ್ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News