ದಲಿತ ವೈದ್ಯೆಗೆ ಕುಡಿಯುವ ನೀರು ನಿರಾಕರಿಸಿದ್ದ ಆರು ಜನರ ವಿರುದ್ಧ ಎಫ್‌ಐಆರ್ ದಾಖಲು

Update: 2018-08-02 15:55 GMT

ಕೌಶಾಂಬಿ(ಉ.ಪ್ರ),ಆ.2: ದಲಿತ ಸಮುದಾಯಕ್ಕೆ ಸೇರಿದ ಮಹಿಳಾ ಅಧಿಕಾರಿಗೆ ಕುಡಿಯುವ ನೀರು ನೀಡಲು ನಿರಾಕರಿಸಿದ್ದಕ್ಕಾಗಿ ಇಬ್ಬರು ಗ್ರಾಮ ಪ್ರಧಾನರು ಸೇರಿದಂತೆ ಆರು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಉಪ ಮುಖ್ಯ ಪಶುವೈದ್ಯಾಧಿಕಾರಿ ಡಾ.ಸೀಮಾ ಅವರು ಜು.31ರಂದು ಜಿಲ್ಲಾ ಪಂಚಾಯತ್ ರಾಜ್ ಅಧಿಕಾರಿ(ಡಿಪಿಆರ್‌ಒ)ಯ ನಿರ್ದೇಶದಂತೆ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಲು ಮಂಝನಪುರ ಬ್ಲಾಕ್‌ನ ಅಂಬಾವಾ ಪೂರಬ್ ಗ್ರಾಮಕ್ಕೆ ತೆರಳಿದ್ದರು. ಡಿಪಿಆರ್‌ಒ ರವಿದತ್ತ ಮಿಶ್ರಾ ಮತ್ತು ಬ್ಲಾಕ್ ಅಭಿವೃದ್ಧಿ ಮುಖ್ಯಸ್ಥ ಝಲ್ಲರ್ ತಿವಾರಿ ಅವರನ್ನು ಸಂಪರ್ಕಿಸಿದ ಬಳಿಕವಷ್ಟೇ ಗ್ರಾಮಕ್ಕೆ ಭೇಟಿ ನೀಡುವಂತೆ ತನಗೆ ಹೇಳಲಾಗಿತ್ತು. ಅವರು ತನ್ನೊಂದಿಗೆ ಅಸಹಜ ರೀತಿಯಲ್ಲಿ ವರ್ತಿಸಿದ್ದರು. ತಾನು ನೀರು ಕೇಳಿದ್ದರೂ ಅಲ್ಲಿ ಕುಳಿತಿದ್ದ ಆರು ಜನರು ಎರಡೂವರೆ ಗಂಟೆಗಳ ಕಾಲ ತನಗೆ ನೀರು ನೀಡಿರಲಿಲ್ಲ. ತಾನು ಮಧುಮೇಹದಿಂದ ಬಳಲುತ್ತಿದ್ದು,ತನ್ನ ಕೈಕಾಲುಗಳು ನಡುಗತೊಡಗಿದ್ದವು. ನೀರಿನ ಬಾಟಲಿಯನ್ನು ತನಗೆ ಕೊಟ್ಟರೆ ಅದು ಅಶುದ್ಧಗೊಳ್ಳುತ್ತದೆ ಮತ್ತು ತಾವದನ್ನು ಎಸೆಯಬೇಕಾಗುತ್ತದೆ ಎಂದು ಅವರು ಹೇಳಿದ್ದರು. ತಾನು ಅಲ್ಲಿಂದ ಹೊರಬಂದು ಗ್ರಾಮಸ್ಥರ ಬಳಿ ನೀರು ಕೇಳಿದಾಗ ಗ್ರಾಮ ಪ್ರಧಾನ ಶಿವಸಂಪತ್ ಮತ್ತು ಡಿಆರ್‌ಪಿಒ ನೀರು ನೀಡದಂತೆ ಸನ್ನೆ ಮಾಡಿ ಸೂಚಿಸಿದ್ದರು ಎಂದು ಸೀಮಾ ದೂರಿನಲ್ಲಿ ಆರೋಪಿಸಿದ್ದಾರೆ.

ಶಿವಸಂಪತ್,ಮಿಶ್ರಾ,ತಿವಾರಿ ಸೇರಿದಂತೆ ಆರು ಜನರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಎಸ್‌ಪಿ ಪ್ರದೀಪ ಗುಪ್ತಾ ತಿಳಿಸಿದರು.

ಸರಕಾರದ ವಿರುದ್ಧ ದಾಳಿ ನಡೆಸಿದ ಪ್ರತಿಪಕ್ಷಗಳು ಬಿಜೆಪಿ ಆಡಳಿತದ ರಾಜ್ಯಗಳಲ್ಲಿ ದಲಿತ ದೌರ್ಜನ್ಯದ ಘಟನೆಗಳು ಹೆಚ್ಚುತ್ತಿವೆ ಎಂದು ಆರೋಪಿಸಿವೆ.

 ಈ ಘಟನೆಯ ಕುರಿತು ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಕಾಂಗ್ರೆಸ್ ಆಗ್ರಹಿಸಿದ್ದರೆ,ಬಿಜೆಪಿಯು ಈಗಲೂ ದಲಿತರನ್ನು ಅಸ್ಪಶ್ಯರೆಂದು ಪರಿಗಣಿಸಿದೆ ಮತ್ತು ಅದಕ್ಕೆ ಸಂವಿಧಾನದಲ್ಲಿ ನಂಬಿಕೆಯಿಲ್ಲ,ಆದರೆ ಮನುವಾದಿ ಜಾತಿ ವ್ಯವಸ್ಥೆಯನ್ನು ಜಾರಿಗೊಳಿಸಲು ಬಯಸುತ್ತಿದೆ ಎಂದು ಎಸ್‌ಪಿ ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News