×
Ad

ಆ.5ಕ್ಕೆ ವಡ್ಡರ್ಸೆ ಪ್ರಶಸ್ತಿ ಪ್ರದಾನ ಸಮಾರಂಭ

Update: 2018-08-02 22:54 IST

ಉಡುಪಿ, ಆ.2: ಬ್ರಹ್ಮಾವರ ತಾಲೂಕು ಪತ್ರಕರ್ತರ ಸಂಘದ ಆಶ್ರಯದಲ್ಲಿ ಹಿರಿಯ ಪತ್ರಕರ್ತ, ಸಂಪಾದಕ ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಹೆಸರಿನಲ್ಲಿ ನೀಡಲಾಗುತ್ತಿರುವ ಮೂರನೇ ವರ್ಷದ ಪತ್ರಿಕೋದ್ಯಮ ಪ್ರಶಸ್ತಿಯನ್ನು ಆ.5ರಂದು ರವಿವಾರ ಖ್ಯಾತ ಪತ್ರಕರ್ತ ಜೋಗಿ (ಗಿರೀಶ್ ರಾವ್ ಹತ್ವಾರ್) ಇವರಿಗೆ ಪ್ರದಾನ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬ್ರಹ್ಮಾವರದ ಬಂಟರ ಭವನದಲ್ಲಿ ಅಪರಾಹ್ನ 2:00ರಿಂದ ರಾತ್ರಿ 9:00 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ ಎಂದರು.

ಅಪರಾಹ್ನ 2:00ಕ್ಕೆ ಪತ್ರಿಕೋದ್ಯಮ- ರಾಜಕಾರಣ- ಕಾನೂನು ವಿಷಯದ ಕುರಿತು ಸಂವಾದ ಕಾರ್ಯಕ್ರಮ ಮಾಜಿ ಶಾಸಕ ವೈ.ಎಸ್.ವಿ.ದತ್ತ ಅವರ ಅದ್ಯಕ್ಷತೆಯಲ್ಲಿ ನಡೆಯಲಿದೆ. ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ ಹಾಗೂ ರೈತ ಪರ ಹೋರಾಟಗಾರ ಸುಧೀರ್‌ಕುಮಾರ್ ಮರೋಳಿ ಇದರಲ್ಲಿ ಭಾಗವಹಿಸಲಿದ್ದಾರೆ ಎಂದರು.

ಸಂಜೆ 4:30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಖ್ಯಾತ ಸಾಹಿತಿ, ಕವಿ ಜಯಂತ್ ಕಾಯ್ಕಿಣಿ ಅವರು ಜೋಗಿ ಅವರಿಗೆ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಮೂಡಬಿದರೆ ಆಳ್ವಾಸ್ ಸಂಸ್ಥೆಯ ಡಾ.ಎಂ. ಮೋಹನ್ ಆಳ್ವ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಶಾಸಕರಾದ ಕೆ.ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ರಾಜ್ಯ ಪಾನೀಯ ನಿಗಮದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ಉದ್ಯಮಿ ಆನಂದ ಸಿ.ಕುಂದರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಭಾಗವಹಿಸಲಿದ್ದಾರೆ.

ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಉಡುಪಿ ಪ್ರೆಸ್ ಕ್ಲಬ್‌ನ ಮಾಧ್ಯಮ ಮಿತ್ರರಿಂದ ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣರ ನಿರ್ದೇಶನದಲ್ಲಿ ‘ವೀರ ಅಭಿಮನ್ಯು’ ಯಕ್ಷಗಾನ ಹಾಗೂ ಸಂಜೆ 6:30ರಿಂದ ಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ‘ರಾಜಾರುದ್ರಕೋಪ’ ಯಕ್ಷಗಾನ ಪ್ರದರ್ಶನ ಗೊಳ್ಳಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಮೋಹನ್ ಉಡುಪ, ವಸಂತ ಗಿಳಿಯಾರು, ಗಣೇಶ್ ಸಾಬರಕಟ್ಟೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News