×
Ad

ಕಲ್ಮಾಡಿ: ಆ.14,15ಕ್ಕೆ ವೆಲೆಂಕಣಿ ಮಾತೆಯ ಪ್ರತಿಷ್ಠಾಪನೋತ್ಸವ

Update: 2018-08-02 22:55 IST

ಉಡುಪಿ, ಆ.2: ಮಲ್ಪೆ-ಕಲ್ಮಾಡಿಯ ಸ್ಟೆಲ್ಲಾ ಮಾರೀಸ್ ಚರ್ಚ್‌ನ ವೆಲಂಕಣಿ ಮಾತೆಯ ಪ್ರತಿಷ್ಠಾಪನೋತ್ಸವ ಆ.14 ಹಾಗೂ 15ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಚರ್ಚ್ ಧರ್ಮಗುರುಗಳಾದ ವಂ.ಆಲ್ಬನ್ ಡಿಸೋಜ ಅವರು ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಉತ್ಸವಕ್ಕೆ ಪೂರ್ವಭಾವಿಯಾಗಿ ಆ.5ರಿಂದ 13ರವರೆಗೆ ನೊವೇನಾ ಪ್ರಾರ್ಥನೆ ಗಳು ಹಾಗೂ ಬಲಿಪೂಜೆಗಳು ನಡೆಯಲಿವೆ. 9ದಿನಗಳ ನೊವೇನಾ ಸಮಯದಲ್ಲಿ ವಿಶೇಷ ಪ್ರಾರ್ಥನೆಗಳು ನಡೆಯಲಿವೆ ಎಂದರು.

ಆ.13ರ ಸೋಮವಾರ ಅಪರಾಹ್ನ 2:20ರಿಂದ ಆದಿಉಡುಪಿ ಜಂಕ್ಷನ್‌ನಿಂದ ಕಲ್ಮಾಡಿ ಚರ್ಚ್‌ವರೆಗೆ ಮಾತೆಯ ತೇರಿನ ಮೆರವಣಿಗೆ ನಡೆಯಲಿದೆ. ಇದಕ್ಕೆ ಉಡುಪಿ ಧರ್ಮಪ್ರಾಂತದ ಜುಡಿಷಿಯಲ್ ವಿಕಾರ್ ಆಗಿರುವ ಅ.ವಂ. ವಾಲ್ಡರ್ ಡಿಮೆಲ್ಲೊ ಚಾಲನೆ ನೀಡುವರು. ಬಳಿಕ ಚರ್ಚ್‌ನಲ್ಲಿ ಪ್ರಾರ್ಥನೆ ಹಾಗೂ ಬಲಿಪೂಜೆ ನಡೆಯಲಿದೆ ಎಂದರು.

ಆ.14ರ ಮಂಗಳವಾರ ಸಂಜೆ 4ಗಂಟೆಗೆ ಬಳ್ಳಾರಿ ಧರ್ಮಪ್ರಾಂತದ ಧರ್ಮಾಧ್ಯಕ್ಷರಾದ ಅ.ವಂ.ಡಾ.ಹೆನ್ರಿ ಡಿಸೋಜರಿಂದ ಬಲಿಪೂಜೆ ನಡೆಯಲಿದೆ. ಸಂಜೆ 6ಕ್ಕೆ ಕನ್ನಡದಲ್ಲಿ ಬಲಿಪೂಜೆ ನಡೆಯಲಿದೆ ಎಂದು ಫಾ.ಆಲ್ಬನ್ ಡಿಸೋಜ ತಿಳಿಸಿದರು.

ಆ.15ರ ಬುಧವಾರ ಬೆಳಗ್ಗೆ 10ಕ್ಕೆ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಜೆರಾಲ್ಡ್ ಐಸಾಕ್ ಲೋಬೊ ಪಾಲ್ಗೊಳ್ಳುವರು. ಬಿಷಪ್ ಅವರು ಸ್ವಾತಂತ್ರ ದಿನಾಚರಣೆಯ ಧ್ವಜಾರೋಹಣ ವನ್ನೂ ನೆರವೇರಿಸಲಿರುವರು. ಬೆಳಗ್ಗೆ 7ಕ್ಕೆ ಕೊಂಕಣಿಯಲ್ಲಿ, ಸಂಜೆ 4ಕ್ಕೆ ಕನ್ನಡ ಹಾಗೂ 6ಕ್ಕೆ ಇಂಗ್ಲೀಷ್‌ನಲ್ಲಿ ದಿವ್ಯ ಬಲಿಪೂಜೆಗಳು ನಡೆಯಲಿವೆ. ಅಪರಾಹ್ನ ಸಾರ್ವಜನಿಕ ಅನ್ನ ಸಂತರ್ಪಣೆ ಸಹ ನಡೆಯಲಿದೆ ಎಂದವರು ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ಸಂಜಯ್ ಅಂದ್ರಾದೆ, ಕಾರ್ಯದರ್ಶಿ ಶೋಭಾ ಮಂಡೋನ್ಸಾ, ಮೆಲ್ವಿನ್ ಕಾರ್ವೆಲ್ಲೊ, ಡಿಯೋನ್ ಡಿಸೋಜ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News