ಬೇಡಿಕೆಗಳ ಈಡೇರಿಕೆಗೆ ಆಗ್ರಹ: ಆಕಾಶವಾಣಿ ಕಾರ್ಯಕ್ರಮ ಸಿಬ್ಬಂದಿಯಿಂದ ಧರಣಿ

Update: 2018-08-03 09:55 GMT

ಮಂಗಳೂರು, ಆ.3: ಉದ್ಯೋಗ ಭಡ್ತಿಯಲ್ಲಿ ವಿಳಂಬ, ಹೊರಗುತ್ತಿಗೆ ಸಿಬ್ಬಂದಿಯ ನೇಮಕ, ಕಾರ್ಯಕ್ರಮ ನಿರ್ಮಾಣದ ಅನುದಾನ ಕಡಿತ ಇತ್ಯಾದಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲು ಆಗ್ರಹಿಸಿ ಹೊಸದಿಲ್ಲಿಯ ಆಕಾಶವಾಣಿ ಮತ್ತು ದೂರದರ್ಶನ ಸಿಬ್ಬಂದಿಯ ಜಂಟಿ ಕ್ರಿಯಾ ಸಮಿತಿಯ ಕರೆಯಂತೆ ಮಂಗಳೂರು ಆಕಾಶವಾಣಿ ಕೇಂದ್ರದ ಮುಖ್ಯದ್ವಾರದ ಎದುರು ಕಾರ್ಯಕ್ರಮ ಸಿಬ್ಬಂದಿ ವರ್ಗವು ಶುಕ್ರವಾರ ಧರಣಿ ನಡೆಸಿತು.

ಸುಮಾರು 25-30 ವರ್ಷಗಳಿಂದ ಪದೋನ್ನತಿ ಪಡೆಯದಿರುವ ಸಿಬ್ಬಂದಿಗೆ ಸಿಗಬೇಕಾದ ಪದೋನ್ನತಿಯನ್ನು ಪೂರ್ವಾನ್ವಯವಾಗುವಂತೆ ಶೀಘ್ರವಾಗಿ ನೀಡಬೇಕು. ಅಡ್‌ಹಾಕ್ ಹಾಗೂ ಇನ್-ಸಿಟು ಸೇವಾವಧಿಯ ಸೇವಾಜೇಷ್ಠತೆ ಪರಿಗಣಿಸಿ 20 ವರ್ಷಗಳ ಸೇವೆ ಸಲ್ಲಿಸಿದ ಪ್ರಸಾರ ನಿರ್ವಾಹಕರಿಗೆ 2 ಪದೊನ್ನತಿ ನೀಡಿ ಸಹಾಯಕ ನಿರ್ದೇಶಕರನ್ನಾಗಿ ಮಾಡಬೇಕು. ಅಡ್‌ಹಾಕ್ ಸೇವಾವಧಿಯನ್ನು ಸೇವಾ ಜೇಷ್ಠತೆಗೆ ಪರಿಗಣಿಸಿ 20 ವರ್ಷಗಳ ಸೇವೆ ಸಲ್ಲಿಸಿದ ಕಾರ್ಯಕ್ರಮ ನಿರ್ವಾಹಕರಿಗೆ 2 ಪದೋನ್ನತಿ ನೀಡಿ ನಿರ್ದೇಶಕರನ್ನಾಗಿ ಮಾಡಬೇಕು. ನಾಲ್ಕು ವರ್ಷಗಳ ನಿಯುತ ಸೇವೆ ಸಲ್ಲಿಸಿದ ಎಲ್ಲಾ ಕಾರ್ಯಕ್ರಮ ನಿರ್ವಾಹಕರಿಗೂ ವೇತನ ಭಡ್ತಿ ನೀಡಬೇಕು. ಬೇರೆ ಬೇರೆ ಇಲಾಖೆಗಳಿಂದ ಅನರ್ಹ ಉನ್ನತ ಅಧಿಕಾರಗಳನ್ನು ಎರವಲು ಸೇವೆಯ ಮೇಲೆ ನಿಯೋಜಿಸಿರುವುದನ್ನು ತಕ್ಷಣ ವಾಪಸ್ ಕರೆಸಿಕೊಳ್ಳಬೇಕು. ಭಾರತೀಯ ಕಾರ್ಯಕ್ರಮ ಸೇವೆಗೆ ನಿಗದಿಗೊಳಿಸಿರುವ ಉನ್ನತ ಹುದ್ದೆಗಳಿಗೆ ತಾಂತ್ರಿಕ ಸೇವೆಯವರನ್ನು ನೇಮಿಸಬಾರದು. ಪ್ರಸಾರ ಭಾರತಿಯಲ್ಲಿ ಖಾಲಿ ಇರುವ ಎಲ್ಲಾ ಕಾರ್ಯಕ್ರಮ ಹುದ್ದೆಗಳನ್ನು ಅರ್ಹ ಕಾರ್ಯಕ್ರಮ ಸಿಬ್ಬಂದಿಗೆ ಒಂದು ಬಾರಿ ನಿಯಮ ಸಡಿಲಿಕೆ ಮಾಡಿ ಪದೋನ್ನತಿಯೊಂದಿಗೆ ಭರ್ತಿ ಮಾಡಬೇಕು ಎಂದು ಧರಣಿನಿರತರು ಆಗ್ರಹಿಸಿದರು.

ಭಾರತೀಯ ಪ್ರಸಾರ ಸೇವೆಯ 810 ಉನ್ನತ ಹುದ್ದೆಗಳಿದ್ದು, ಖಾಯಂ ಆಗಿ 8 ಹಾಗೂ ಪ್ರಭಾರಿಯಾಗಿ 260 ಮಾತ್ರ ಹಾಲಿ ಕೆಲಸದಲ್ಲಿದ್ದಾರೆ. ಉಳಿದ ಹುದ್ದೆಗಳಿಗೆ ಬೇರೆ ಇಲಾಖೆಯಿಂದ ಎರವಲು ಸೇವೆಯ ಮೇರೆಗೆ ತಂದು ತುಂಬುವ ಕೆಲಸ ಪ್ರಸಾರ ಭಾರತಿ ಮಾಡುತ್ತಿದೆ. ನಿಗದಿತ ಸಮಯದಲ್ಲಿ ಎಲ್ಲಾ ಹುದ್ದೆಗಳನ್ನು ತುಂಬದೆ, ಹಾಲಿ ಇರುವವರಿಗೆ ಇಲಾಖಾ ಭಡ್ತಿ ಪ್ರಕ್ರಿಯೆ ಮಾಡದೆ ಆಕಾಶವಾಣಿ ದೂರದರ್ಶನ ಸಮಸ್ಯೆ ಎದುರಿಸುತ್ತಿದೆ. ಮಾಧ್ಯಮ ಪೈಪೋಟಿಯ ಸಂದರ್ಭದಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡದೆ ಇದ್ದ ಸಿಬ್ಬಂದಿಗೆ ನ್ಯಾಯಯುತ ಭಡ್ತಿ ನೀಡದೆ ಕಾರ್ಯಕ್ರಮ ಗುಣಮಟ್ಟ ಸೊರಗುವಂತೆ ಮಾಡಿದ ಆಡಳಿತ ವೈಖರಿ ಖಂಡನೀಯ ಎಂದಿರುವ ಧರಣಿನಿರತರು, ಪ್ರಸಾರ ಭಾರತೀಯ ಒಟ್ಟು ಬಜೆಟ್‌ನ ಶೇ.15ರಷ್ಟು ಮಾತ್ರ ಕಾರ್ಯಕ್ರಮಕ್ಕಾಗಿ ವೆಚ್ಚ ಮಾಡಲಾಗುತ್ತಿದ್ದು ಅನುದಾನ ಹೆಚ್ಚಿಸುವಂತೆ ಒತ್ತಾಯಿಸಿದರು.

ಕಾರ್ಯಕ್ರಮ ಸಿಬ್ಬಂದಿ ಸಂಘಟನೆಯ ಕಾರ್ಯದರ್ಶಿ ಟಿ.ಶ್ಯಾಮ್ ಪ್ರಸಾದ್, ಜೊತೆ ಕಾರ್ಯದರ್ಶಿ ದೇವು ಹನೇಹಳ್ಳಿ, ಖಜಾಂಚಿ ಶುಭದಾ ಡಿ. ರೈ ಸದಸ್ಯರಾದ ಉಷಾಲತಾ ಸರಪಾಡಿ, ಸದಾನಂದ ಹೊಳ್ಳ, ಸೂರ್ಯನಾರಾಯಣ ಭಟ್, ಕನ್ಸೆಪ್ಟಾ ಫೆರ್ನಾಂಡಿಸ್, ಡಾ.ಶರಭೇಂದ್ರ ಸ್ವಾಮಿ ಮತ್ತು ಡಾ.ಸದಾನಂದ ಪೆರ್ಲ ಮತ್ತಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News