‘ಸಿಂಹದ ವೇಷದಲ್ಲಿನ ಕತ್ತೆಯಂತೆ’: ಕೋಮುವಾದ ಕುರಿತು ರಾಹುಲ್ ಗಾಂಧಿ
Update: 2018-08-03 23:19 IST
ಹೊಸದಿಲ್ಲಿ,ಆ.3: ಖ್ಯಾತ ಲೇಖಕ ಮುನ್ಷಿ ಪ್ರೇಮಚಂದ್ ಅವರನ್ನು ಶುಕ್ರವಾರ ನೆನಪಿಸಿಕೊಂಡ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು,ಕೋಮುವಾದವು ಸಂಸ್ಕೃತಿಯ ಸೋಗಿನಡಿ ಮರೆಮಾಚಿಕೊಂಡಿದೆ ಎಂದಿದ್ದಾರೆ. ಪ್ರೇಮಚಂದ್‌ರ ಹಲವಾರು ಕಥೆಗಳಲ್ಲಿ ಕೋಮುವಾದದ ಉಲ್ಲೇಖವಿದೆ.
ಪ್ರೇಮಚಂದ್ ಅವರಿಗೆ ಗೌರವ ಸೂಚಕ ಟ್ವೀಟ್ ಮಾಡಿರುವ ರಾಹುಲ್, ಬಹುಶಃ ಕೋಮುವಾದವು ತನ್ನ ಸಹಜ ಅವತಾರದಲ್ಲಿ ಕಾಣಿಸಿಕೊಳ್ಳಲು ನಾಚಿಕೊಳ್ಳುತ್ತಿದೆ ಎಂದಿದ್ದಾರೆ.
ಕತ್ತೆಯೊಂದು ವನರಾಜನಾಗಲು ಸಿಂಹದ ವೇಷವನ್ನು ತೊಟ್ಟಂತೆ ಕೋಮುವಾದವು ತನ್ನನ್ನು ಸಂಸ್ಕೃತಿಯ ಸೋಗಿನಲ್ಲಿ ಮರೆಮಾಚಿಕೊಂಡಿದೆ ಎಂದು ಅವರು ಕುಟುಕಿದ್ದಾರೆ.
ಪ್ರೇಮಚಂದ್ ಅವರು 1934ರಲ್ಲಿ ಕೋಮುವಾದ ಮತ್ತು ಸಂಸ್ಕೃತಿ ಕುರಿತು ಬರೆದಿದ್ದ ಕಥೆಯಲ್ಲಿನ ಉಲ್ಲೇಖಗಳ ಹಿನ್ನೆಲೆಯಲ್ಲಿ ರಾಹುಲ್ ಈ ಹೋಲಿಕೆಯನ್ನು ಪ್ರಸ್ತಾಪಿಸಿದ್ದಾರೆ.
ಪ್ರೇಮಚಂದ್ ಅವರ 138ನೇ ಹುಟ್ಟುಹಬ್ಬವನ್ನು ನಾಲ್ಕು ದಿನಗಳ ಹಿಂದೆ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗಿತ್ತು.