×
Ad

ಅತ್ಯಾಚಾರ ಪ್ರಕರಣಗಳಲ್ಲಿ ನೈಜ ದೂರು ನೀಡಿ, ಸುಳ್ಳು ಬೇಡ: ಉಡುಪಿ ಜಿಲ್ಲಾ ನ್ಯಾಯಾದೀಶ ವೆಂಕಟೇಶ್ ನಾಯ್ಕಾ

Update: 2018-08-04 19:22 IST

ಉಡುಪಿ, ಆ.4: ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ಲೈಂಗಿಕ ಕಿರುಕುಳಗಳ ಬಗ್ಗೆ ನೈಜ ದೂರು ದಾಖಲಿಸಿ. ಸುಳ್ಳು ದೂರು ನೀಡಬೇಡಿ. ಇದರ ಪರಿಣಾಮ ಎದುರಿಸಬೇಕಾಗುತ್ತದೆ ಮತ್ತು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಉಡುಪಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವೆಂಕಟೇಶ್ ನಾಯ್ಕಾ ಟಿ. ಹೇಳಿದ್ದಾರೆ.

ಉಡುಪಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಕೀಲರ ಸಂಘ, ಪವರ್ ಸಂಸ್ಥೆ, ಅಜ್ಜರಕಾಡು ಡಾ.ಜಿ.ಶಂಕರ್ ಸರಕಾರಿ ಮಹಿಳಾ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಮತ್ತು ಉಡುಪಿ ಲೀಗಲ್ ಇನ್ಫೋ ಪೇಜಸ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಕಾಲೇಜಿನಲ್ಲಿ ಆಯೋಜಿಸಲಾದ ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳ(ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ- 2013ರ ಕುರಿತ ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಇಂದು ಅತ್ಯಾಚಾರ, ಲೈಂಗಿಕ ದೌರ್ಜನ್ಯಗಳ ಬಗ್ಗೆ ಕಠಿಣ ಕಾನೂನುಗಳಿದ್ದು, ಪೊಕ್ಸೊ ಕಾಯಿದೆಯಡಿ ಗಲ್ಲು ಶಿಕ್ಷೆ ಕೂಡ ನೀಡಲು ಅವಕಾಶಗಳಿವೆ. ಕೌಟುಂಬಿಕ ದೌರ್ಜನ್ಯ ಪ್ರಕರಣಗಳಲ್ಲಿಯೂ ಮಹಿಳೆಯರಿಗೆ ಸಾಕಷ್ಚು ಪರಿಹಾರ ಸಿಗುತ್ತಿದೆ. ಆಸ್ತಿಯಲ್ಲೂ ಮಹಿಳೆಯರಿಗೆ ಸಮಾನ ಹಕ್ಕು ನೀಡಲಾಗಿದೆ. ಹೀಗಾಗಿ ಮಹಿಳೆ ಇಂದು ಅಬಲೆಯಲ್ಲ, ಸಬಲೆ ಎಂದು ಅವರು ತಿಳಿಸಿದರು.

ಮಹಿಳೆಯರು ಶಿಕ್ಷಣ, ಉದ್ಯೋಗ ಪಡೆದು ಆರ್ಥಿಕವಾಗಿ ಸ್ವಾವಲಂಬಿ ಗಳಾಗಿದ್ದರೂ ಇಂದಿನ ಪುರುಷ ಪ್ರಧಾನ ಸಮಾಜದಲ್ಲಿ ಅವರ ಮೇಲೆ ಅತ್ಯಾ ಚಾರ, ಲೈಂಗಿಕ ಕಿರುಕುಳ, ಭ್ರೂಣ ಹತ್ಯೆಯಂತಹ ದೌರ್ಜನ್ಯ, ಶೋಷಣೆಗಳು ನಡೆಯುತ್ತಲೇ ಇವೆ. ಮಹಿಳೆಯರ ಅಕ್ರಮ ಸಾಗಾಟ ಮತ್ತು ಅವರಿಗೆ ಪುನರ್ ವಸತಿ ಕಲ್ಪಿಸಲು ಹಲವು ಕಾನೂನುಗಳಿವೆ ಎಂದರು.

ಹೊರ ರಾಜ್ಯ ಹಾಗೂ ವಿದೇಶಗಳಲ್ಲಿ ಉದ್ಯೋಗ ಕೊಡಿಸುವ ವಿಚಾರದಲ್ಲಿ ಮಹಿಳೆಯರನ್ನು ದುರುಪಯೋಗ ಪಡಿಸಿಕೊಳ್ಳುವ ಬಗ್ಗೆ ಎಚ್ಚರ ಇರಬೇಕು. ಈ ನಿಟ್ಟಿನಲ್ಲಿ ಕಾನೂನಿನ ಅರಿವನ್ನು ಮಹಿಳೆಯರು ಪಡೆದುಕೊಳ್ಳಬೇಕು. ವಿದ್ಯಾರ್ಥಿಗಳು ಮೊಬೈಲ್, ಇಂಟರ್‌ನೆಟ್ ಬಳಕೆಯ ಸಂದರ್ಭ ಸಾಕಷ್ಟು ಜಾಗೃತೆ ವಹಿಸಬೇಕು. ಅಧ್ಯಯನಕ್ಕೆ ಹೆಚ್ಚು ಗಮನ ನೀಡಿ, ಶಿಕ್ಷಣಕ್ಕೆ ಪೂಕರವಾದ ಮಾಹಿತಿಗಾಗಿ ಮಾತ್ರ ಇಂಟರ್‌ನೆಟ್‌ಗಳನ್ನು ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಪ್ರಾಧಿಕಾರದ ಸದಸ್ಯೆ ಕಾರ್ಯದರ್ಶಿ ಲತಾ, ವಕೀಲರ ಸಂಘದ ಅಧ್ಯಕ್ಷ ಎಚ್.ರತ್ನಾಕರ ಶೆಟ್ಟಿ, ಮಾನವ ಹಕ್ಕುಗಳು ಮತ್ತು ಅಹವಾಲುಗಳು ಅಧ್ಯಕ್ಷೆ ಸುಲ್ತಾನ ಇಕ್ಬಾಲ್ ಮುಖ್ಯ ಅತಿಥಿ ಗಳಾಗಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಸಹಾಯಕ ಸರಕಾರಿ ಅಭಿ ಯೋಜಕಿ ಜ್ಯೋತಿ ಪಿ.ನಾಯಕ್ ಮಾತನಾಡಿದರು. ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಎಸ್. ವಹಿಸಿ ದ್ದರು. ಪವರ್ ಸಂಸ್ಥೆಯ ಅಧ್ಯಕ್ಷೆ ಡಾ.ಗಾಯತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಾಧನ ಕಿಣಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News