×
Ad

ಉದ್ಯಾವರ ಪಿತ್ರೋಡಿಯಲ್ಲಿ ಅಪರೂಪದ ಜ್ವರಕ್ಕೆ ಬಾಲಕ ಬಲಿ

Update: 2018-08-04 21:34 IST

ಉಡುಪಿ, ಆ.4: ಉದ್ಯಾವರ ಗ್ರಾಪಂ ವ್ಯಾಪ್ತಿಯ ಪಿತ್ರೋಡಿಯ ಕಲಾಯಿ ಬೈಲುವಿನ ವಿದ್ಯಾರ್ಥಿ ದೀಕ್ಷಿತ್ (18) ಎಂಬಾತನನ್ನು ಬಲಿ ತೆಗೆದುಕೊಂಡ ಮೆಲಿಯೊಯಿಡೊಸಿಸ್ ಎಂಬ ಅಪರೂಪದ ಜ್ವರದ ಬಗ್ಗೆ ಅಧ್ಯಯನ ನಡೆಸಲು ದೆಹಲಿಯ ರಾಷ್ಟ್ರೀಯ ರೋಗ ನಿಯಂತ್ರಣ ಮಂಡಳಿಯ ತಂಡ ಉಡುಪಿಗೆ ಆಗಮಿಸಿದ್ದು, ಈ ಜ್ವರಕ್ಕೆ ಕಾರಣವಾದ ಬ್ಯಾಕ್ಟೀರಿಯವನ್ನು ತಂಡ ಪತ್ತೆ ಮಾಡಿದೆ.

ತೀವ್ರ ಜ್ವರದಿಂದ ಮಣಿಪಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ದೀಕ್ಷಿತ್ ಜು. 28 ರಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು. ದೆಹಲಿಯ ಎನ್‌ಸಿಡಿಸಿಯ ವೈದ್ಯ ಡಾ.ಅಖಿಲೇಶ್ ನೇತೃತ್ವದಲ್ಲಿ ಇಬ್ಬರು ಮೈಕ್ರೋ ಬಯೋಲಜಿಸ್ಟ್, ಇಬ್ಬರು ವೈದರ ತಂಡ ಅಧ್ಯಯನ ನಡೆಸಿ ದೀಕ್ಷಿತ್ ದೇಹದೊಳಗೆ ಸೇರಿಕೊಂಡು ಈ ಅಪರೂಪದ ಜ್ವರಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ‘ಬರ್ಕಲ್‌ಡ್ಲೇರಿಯಾ ಸೆಡೋಮೊನಸ್’ವನ್ನು ಪತ್ತೆ ಹಚ್ಚಿದ್ದಾರೆ.

ಈ ಬ್ಯಾಕ್ಟೀರಿಯ ದೀಕ್ಷಿತ್ ದೇಹದೊಳಗೆ ಸೇರಿಕೊಂಡು ಮೆದುಳಿಗೆ ತೀವ್ರ ಹಾನಿ ಮಾಡಿರುವುದರಿಂದ ಮತ್ತು ರೋಗ ಪತ್ತೆಯಾಗುವಲ್ಲಿ ವಿಳಂಬ ಹಾಗೂ ಸರಿಯಾದ ಸಮಯದಲ್ಲಿ ರೋಗ ನಿರೋಧಕ ಸಿಗದಿರುವುದರಿಂದ ಈತ ಮೃತ ಪಟ್ಟಿರುವುದಾಗಿ ಹೇಳಲಾಗಿದೆ.

ಗೋವಿಂದ ನಗರದ ಜಯ ಕುಂದರ್ ಮತ್ತು ಪ್ರತಿಮಾ ದಂಪತಿಯ ಏಕೈಕ ಪುತ್ರ ದೀಕ್ಷಿತ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಕಿದಿಯೂರು ಶ್ಯಾಮಿಲಿ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿಯಲ್ಲಿ ಶೇ.95 ಮತ್ತು ಎಸೆಸೆಲ್ಸಿಯಲ್ಲಿ ಶೇ.97 ಅಂಕ ಪಡೆದಿದ್ದನು. ಮುಂದೆ ಇಂಜಿನಿಯರ್ ಕಲಿಯಲು ಮಣಿಪಾಲ ಎಂಐಟಿಯಲ್ಲಿ ಸೀಟು ಕೂಡ ಪಡೆದಿದ್ದನು.

ವಿದ್ಯಾರ್ಥಿ ಸಾವಿನ ಬಳಿಕ ಎಚ್ಚೆತ್ತುಕೊಂಡಿರುವ ಆರೋಗ್ಯ ಇಲಾಖೆ, ಗ್ರಾಪಂ ಮಟ್ಟದಲ್ಲಿ ಸಭೆ ನಡೆಸಿ ಗ್ರಾಮಸ್ಥರಲ್ಲಿ ಈ ರೋಗದ ಬಗ್ಗೆ ಜಾಗೃತಿ ಮೂಡಿಸು ತ್ತಿದೆ. ವೈದ್ಯರ ತಂಡವು ಕ್ಷೇತ್ರಕಾರ್ಯ ನಡೆಸಿದ್ದು ಕಳೆದ ಎರಡು ದಿನಗಳಿಂದ ಮನೆ ಪರಿಸರ ಮತ್ತು ಗ್ರಾಮದ ವಿವಿಧ ಭಾಗಗಳಲ್ಲಿ ಮಣ್ಣು ಮತ್ತು ನೀರಿನ ಮಾದರಿ ಸಂಗ್ರಹಿಸಿ, ಬ್ಯಾಕ್ಟೀರಿಯಾ ಮೂಲಗಳನ್ನು ಪತ್ತೆ ಹಚ್ಚುವ ಕಾರ್ಯ ವನ್ನು ನಡೆಸುತ್ತಿದೆ. ಅಲ್ಲದೆ ರೋಗ ಲಕ್ಷ್ಮಣ, ಪರಿಸರದ ಅವಲೋಕನ, ಜ್ವರ ಹೇಗೆ ಬಂತು ಸೇರಿದಂತೆ ಎಲ್ಲ ಆಯಾಮಗಳನ್ನು ತಂಡ ಅಧ್ಯಯನ ನಡೆಸು ತ್ತಿದೆ.

ಇಲಿ ಜ್ವರ ಮಾದರಿಯ ಈ ಖಾಯಿಲೆ ಮಣ್ಣಿನಲ್ಲಿರುವ ಬ್ಯಾಕ್ಟೀರಿಯಾಗಳ ಮೂಲಕ ಹರಡುತ್ತದೆ. ಒದ್ದೆ ಮಣ್ಣು ಮತ್ತು ಭತ್ತದ ಗದ್ದೆ ಮತ್ತು ಜೌಗು ಪ್ರದೇಶದಲ್ಲಿ ಈ ಬ್ಯಾಕ್ಷೀರಿಯಾಗಳು ಕಂಡು ಬರುತ್ತವೆ. ಇದು ಸಾಂಕ್ರಾಮಿಕ ರೋಗವಲ್ಲ. ಬ್ಯಾಕ್ಟೀರಿಯಾವು ದೇಹದಲ್ಲಿರುವ ಗಾಯ, ದೂಳು ಅಥವಾ ನೀರಿನ ಮೂಲಕ ಮನುಷ್ಯ ದೇಹವನ್ನು ಪ್ರವೇಶಿಸಿ ಖಾಯಿಲೆಗೆ ಕಾರಣವಾಗು ತ್ತದೆ. ಈ ಹಿಂದೆ ಕೂಡ ಈ ಕಾಯಿಲೆ ಈ ಪರಿಸರದಲ್ಲಿ ಮತ್ತು ಜಿಲ್ಲೆಯ ವಿವಿಧ ಕಡೆಗಳಲ್ಲಿಯೂ ಕಂಡುಬಂದಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಅಪರೂಪದ ಈ ಕಾಯಿಲೆ ಬಗ್ಗೆ ಅಧ್ಯಯನ ನಡೆಸಲು ದೆಹಲಿಯ ಎನ್‌ಸಿ ಡಿಸಿಯ ತಂಡ ಆಗಮಿಸಿದೆ. ಈ ಕಾಯಿಲೆಯ ಬಗ್ಗೆ ಯಾರು ಕೂಡ ಗಾಬರಿ ಪಡಬೇಕಾಗಿಲ್ಲ. ರೋಗ ಲಕ್ಷಣಗಳು ಕಂಡುಬಂದಾಗ ಸೂಕ್ತ ಕಾಲದಲ್ಲಿ ಚಿಕಿತ್ಸೆ ಪಡೆದರೆ ಗುಣಪಡಿಸಬಹುದು. ಈ ಕಾಯಿಲೆಯ ಬಗ್ಗೆ ಉದ್ಯಾವರ ಪರಿಸರ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.
-ಡಾ.ರೋಹಿಣಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಉಡುಪಿ ಜಿಲ್ಲೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News