ಉಚ್ಚಿಲ ಬಡಾ ಗ್ರಾಪಂ: ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಮುಂದಾದ ಸ್ವಪಕ್ಷೀಯರು

Update: 2018-08-04 16:20 GMT

ಪಡುಬಿದ್ರೆ, ಆ. 4: ಉಚ್ಚಿಲ ಬಡಾ ಗ್ರಾಮ ಪಂಚಾಯ್ತಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸ್ವಪಕ್ಷೀಯರೇ ಮುಂದಾಗಿರುವ ಘಟನೆ ಉಚ್ಚಿಲ ಬಡಾ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ.

ಶನಿವಾರ ನಡೆದ ಸಭೆಯಲ್ಲಿ ಅಧ್ಯಕ್ಷೆ ನಾಗರತ್ನ ಎ ಕರ್ಕೇರ, ಬಿಜೆಪಿ ಬೆಂಬಲಿತ 12 ಸದಸ್ಯರು, ಕಾಂಗ್ರೆಸ್ ಬೆಂಬಲಿತ 6 ಸದಸ್ಯರು ಹಾಜರಾಗಿದ್ದರು. ಬಿಜೆಪಿ ಬೆಂಬಲಿತ ಓರ್ವ ಸದಸ್ಯೆ ಹಾಗೂ ಎಸ್‌ಡಿಪಿಐ ಬೆಂಬಲಿತ ಸದಸ್ಯರೊಬ್ಬರು ಗೈರಾಗಿದ್ದರು. ಸಭೆಗೆ ಆಗಮಿಸಿದ್ದ ಬಿಜೆಪಿ ಬೆಂಬಲಿತ ಸದಸ್ಯರು ಸಭೆಯ ನಡಾವಳಿ ದಾಖಲೆ ಪುಸ್ತಕದಲ್ಲಿ ಸಹಿ ಮಾಡಿ ಹೊರ ನಡೆದಿದ್ದು, ಸಭೆ ಮೊಟಕುಗೊಂಡಿದೆ.

ಉಚ್ಚಿಲ ಬಡಾ ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷರ ಸಹಿತ ಬಿಜೆಪಿ ಬೆಂಬಲಿತ 14 ಹಾಗೂ ಕಾಂಗ್ರೆಸ್ ಬೆಂಬಲಿತ 6 ಹಾಗೂ ಓರ್ವ ಎಸ್‌ಡಿಪಿಐ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದರು. ಅಧ್ಯಕ್ಷೆಯಾಗಿ ಬಿಜೆಪಿಯ ನಾಗರತ್ನ ಎ ಕರ್ಕೇರ ಆಯ್ಕೆಯಾಗಿದ್ದರು.

ಇದೀಗ ಅಧ್ಯಕ್ಷರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಬೆಂಬಲಿತರು ಅಧ್ಯಕ್ಷರನ್ನು ಬದಲಾವಣೆ ಮಾಡಬೇಕು ಎಂದು ಪಟ್ಟುಹಿಡಿದಿದ್ದಾರೆ. ಈ ಹಿಂದೆ ಕೋರಂ ಕೊರತೆಯಿಂದ ಜುಲೈ 30 ಹಾಗೂ ಆಗಸ್ಟ್ 1 ರಂದು ಸಾಮಾನ್ಯ ಸಭೆ ಎರಡು ಬಾರಿ ಮುಂದೂಡಲ್ಪಟ್ಟಿತ್ತು.

ಅಧ್ಯಕ್ಷರ ಬದಲಾವಣೆ ಮಾಡುವಂತೆ 15 ಜನ ಸದಸ್ಯರು ಸಹಿ ಮಾಡಿ ಆಗಸ್ಟ್ 31 ರಂದು ಉಪ ವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಮುಂದಿನ 30 ದಿನಗಳೊಳಗೆ ತೀರ್ಮಾನಿಸಿ ಅವರು ಸಭೆ ಕರೆಯಲಿದ್ದಾರೆ. ಅಂದಿನ ಸಭೆಯಲ್ಲಿ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳುತ್ತೇವೆ. ಆ ಬಳಿಕ ಅವರು ಹೊಸ ಅಧ್ಯಕ್ಷರ ಆಯ್ಕೆಗೆ ದಿನಾಂಕ ಗೊತ್ತು ಪಡಿಸಲಿದ್ದಾರೆ ಎಂದು ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯ ಚಂದ್ರಶೇಖರ ಕೋಟ್ಯಾನ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News