×
Ad

ಮಂಗಳೂರು: ಹಳೆ ಪ್ರೇಮಿ ಕೊಲೆ ಪ್ರಕರಣ; ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

Update: 2018-08-04 22:06 IST

ಮಂಗಳೂರು, ಆ.4: ಮಾಜಿ ಪ್ರಿಯಕರನ ಕೊಲೆಗೆ ದುಷ್ಪ್ರೇರಣೆ ನೀಡಿದ ಪ್ರಿಯತಮೆ ಮತ್ತು ಆತನ ಪ್ರಿಯಕರನ ವಿರುದ್ಧದ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾಗಿದ್ದು, ಆರೋಪಿಗಳಿಗೆ ಜೀವಾವಧಿ ಮತ್ತು 25 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.

ತಿಪಟೂರು ಅಂಧನಕೆರೆ ಗ್ರಾಮದ ರಂಗ ಯಾನೆ ಗವಿ ರಂಗ ಯಾನೆ ಹರೀಶ್ (28) ಹಾಗೂ ಮುಲ್ಕಿ ಕಾರ್ನಾಡು ಪಡುಬೈಲು ನಿವಾಸಿ ಸುಷ್ಮಾ ಪ್ರೆಸಿಲ್ಲಾ (28) ಶಿಕ್ಷೆಗೊಳಗಾದ ಅಪರಾಧಿಗಳು. ಕಾರ್ಕಳ ಕೆಂದೊಟ್ಟು ಪದವು ನಿವಾಸಿ ಅವಿನಾಶ್ ಸುವರ್ಣ (21) ಕೊಲೆಯಾದ ಯುವಕ. 

ಪ್ರಕರಣ ವಿವರ: ಗವಿ ರಂಗ ಯಾನೆ ಹರೀಶ್ ಕೊಲೆ ಪ್ರಕರಣದ ನೇರ ಭಾಗಿಯಾದ ಆರೋಪಿ. ಸುಷ್ಮಾ ಪ್ರಸಿಲ್ಲಾ ಕೊಲೆಗೆ ದುಷ್ಪ್ರೇರಣೆ ನೀಡಿದ ಆರೋಪಿಯಾಗಿದ್ದಾಳೆ. ಇತ್ತಂಡಗಳ ವಾದವನ್ನು ಆಲಿಸಿದ ನ್ಯಾಯಾಧೀಶ ಡಿ.ಟಿ.ಪುಟ್ಟರಂಗ ಸ್ವಾಮಿ ಗುರುವಾರ ಆರೋಪ ಸಾಬೀತುಪಡಿಸಿ ತೀರ್ಪು ನೀಡಿದರೆ, ಶನಿವಾರ ಶಿಕ್ಷೆ ಪ್ರಮಾಣವನ್ನು ಪ್ರಕಟಿಸಿದರು.

ರಂಗ ಯಾನೆ ಗವಿ ರಂಗನ ಮೇಲಿರುವ ಕೊಲೆ ಪ್ರಕರಣ (302) ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ. ದಂಡ ವಿಧಿಸಲಾ ಗಿದೆ. ಒಂದು ವೇಳೆ ದಂಡ ವಿಧಿಸಲು ತಪ್ಪಿದಲ್ಲಿ 2 ತಿಂಗಳ ಹೆಚ್ಚುವರಿ ಸಾದಾ ಶಿಕ್ಷೆ ಅನುಭವಿಸಬೇಕು. 2ನೇ ಆರೋಪಿ ಸುಷ್ಮಾ ಕೊಲೆಗೆ ಒಳಸಂಚು ರೂಪಿಸಿದ ಹಿನ್ನೆಲೆಯಲ್ಲಿ ಜೀವಾವಧಿ ಮತ್ತು 25 ಸಾವಿರ ದಂಡ ವಿಧಿಸಲಾಗಿದೆ. ಒಂದು ವೇಳೆ ದಂಡ ವಿಧಿಸಲು ತಪ್ಪಿದಲ್ಲಿ 2 ತಿಂಗಳ ಸಾದಾ ಶಿಕ್ಷೆ ಅನುಭವಿಸಬೇಕು.

ಪರಿಹಾರದ ಮೊತ್ತದಲ್ಲಿ 40 ಸಾವಿರ ರೂ. ಹಣವನ್ನು ಕೊಲೆಯಾದ ಅವಿನಾಶ್‌ನ ತಂದೆಗೆ ಪರಿಹಾರವಾಗಿ ನೀಡಬೇಕು. ಅವರು ದ.ಕ. ಜಿಲ್ಲಾಧಿಕಾರಿಗಳ ಅಧೀನದ ಕಾನೂನು ಸೇವಾ ಪ್ರಾಧಿಕಾರದಿಂದ ಪರಿಹಾರ ಪಡೆಯಲು ಅರ್ಹರೆಂದು ತೀರ್ಪಿನಲ್ಲಿ ಹೇಳಲಾಗಿದೆ.

 ಈ ಪ್ರಕರಣದಲ್ಲಿ ಮುಲ್ಕಿ ಠಾಣಾಧಿಕಾರಿ ರಾಮಚಂದ್ರ ನಾಯಕ್ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು. ಸರಕಾರದ ಪರ ವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಜುಡಿತ್ ಓಲ್ಗಾ ಮಾರ್ಗರೆಟ್ ಕ್ರಾಸ್ತಾ ಅವರು ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News