×
Ad

ಪಿಎನ್‌ಬಿ ವಂಚನೆ ಹಗರಣ: ವಿಪುಲ್ ಅಂಬಾನಿಗೆ ಜಾಮೀನು

Update: 2018-08-04 22:11 IST

ಮುಂಬೈ, ಆ.4: ಬಹುಕೋಟಿ ಪಿಎನ್‌ಬಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಚಿನ್ನಾಭರಣ ವ್ಯಾಪಾರಿ ನೀರವ್‌ಮೋದಿಯ ಸಂಸ್ಥೆಯ ಹಿರಿಯ ಅಧಿಕಾರಿ ವಿಪುಲ್ ಅಂಬಾನಿಗೆ ವಿಶೇಷ ಸಿಬಿಐ ನ್ಯಾಯಾಲಯ ಶನಿವಾರ ಜಾಮೀನು ಮಂಜೂರುಗೊಳಿಸಿದೆ.

ನೀರವ್ ಮೋದಿ ಒಡೆತನದ ಫೈರ್ ಸ್ಟಾರ್ ಡೈಮಂಡ್ ಸಂಸ್ಥೆಯ ಅಧ್ಯಕ್ಷ (ಆರ್ಥಿಕ ವಿಭಾಗ)ರಾಗಿರುವ ಅಂಬಾನಿಯನ್ನು ಈ ವರ್ಷದ ಫೆಬ್ರವರಿಯಲ್ಲಿ ಸಿಬಿಐ ಬಂಧಿಸಿತ್ತು. ನೀರವ್ ಮೋದಿಯ ಸಂಸ್ಥೆಯ ಪರವಾಗಿ ಪಿಎನ್‌ಬಿಯ ಮಾಜಿ ಡೆಪ್ಯುಟಿ ಮ್ಯಾನೇಜರ್ ಗೋಕುಲ್‌ನಾಥ್ ಶೆಟ್ಟಿ ಅಕ್ರಮ ‘ವಾಗ್ದಾನ ಪತ್ರ’ವನ್ನು ಒದಗಿಸಿರುವುದು ಅಂಬಾನಿಗೆ ತಿಳಿದಿತ್ತು ಎಂದು ಸಿಬಿಐ ತಿಳಿಸಿದೆ. ಈ ಪ್ರಕರಣದಲ್ಲಿ ಸಿಬಿಐ ಈಗಾಗಲೇ ಆರೋಪಪಟ್ಟಿ ದಾಖಲಿಸಿರುವ ಕಾರಣ ತನ್ನ ಕಸ್ಟಡಿ ಅವಧಿ ಮುಂದುವರಿಸುವ ಅಗತ್ಯವಿಲ್ಲ ಎಂದು ಅಂಬಾನಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು ಇದನ್ನು ಪುರಸ್ಕರಿಸಿದ ಸಿಬಿಐ ವಿಶೇಷ ನ್ಯಾಯಾಲಯ 1 ಲಕ್ಷ ರೂ. ವೈಯಕ್ತಿಕ ಮುಚ್ಚಳಿಕೆ ಸಲ್ಲಿಸುವಂತೆ ತಿಳಿಸಿ ಜಾಮೀನು ಮಂಜೂರುಗೊಳಿಸಿದೆ. ಅಲ್ಲದೆ ಪ್ರಕರಣದ ಸಾಕ್ಷ ನಾಶಕ್ಕೆ ಪ್ರಯತ್ನಿಸಬಾರದು ಹಾಗೂ ಪೂರ್ವಾನುಮತಿಯಿಲ್ಲದೆ ದೇಶ ಬಿಟ್ಟು ತೆರಳಬಾರದು ಎಂಬ ಷರತ್ತು ವಿಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News