×
Ad

ದನ ಕಳವು: ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

Update: 2018-08-04 22:17 IST

ಮಂಗಳೂರು, ಆ.4: ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಬೈಲ್ ಎಂಬಲ್ಲಿನ ಮನೆಯ ಹಟ್ಟಿಯಿಂದ ಎರಡು ದನಗಳನ್ನು ಕಳವು ಮಾಡಿದ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ಮತ್ತೋರ್ವ ಆರೋಪಿಯನ್ನು ಬಂಧಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿ ಯಾಗಿದ್ದಾರೆ.

ಬಜ್ಪೆ ಕಳವಾರು ಆಶ್ರಯ ಕಾಲನಿ ನಿವಾಸಿ ಮುಹಮ್ಮದ್ ಮುನೀರ್ (36) ಬಂಧಿತ ಆರೋಪಿ. ಈತ ಜು.17ರಂದು ಬೆಳಗ್ಗಿನ ಜಾವ 3:30ರ ಸುಮಾರಿಗೆ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಮೂಡುಶೆಡ್ಡೆ ಬೈಲ್ ನಿವಾಸಿ ಪುರುಷೋತ್ತಮರ ಮನೆಯ ಹಟ್ಟಿಯಲ್ಲಿ ಕಟ್ಟಿ ಹಾಕಿದ 2 ದನಗಳನ್ನು  ಟಾಟಾ ಸುಮೋದಲ್ಲಿ ಕದ್ದೊಯ್ದಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ಇಮ್ರಾನ್ ಯಾನೆ ಕುಟ್ಟ ಇಮ್ರಾನ್, ಉಮರ್ ಫಾರೂಕ್ ಮತ್ತು ನಿಸಾರುದ್ದಿನ್ ಯಾನೆ ಪಾರಿವಾಳ ನಿಸಾರ್ ಎಂಬವರನ್ನು ಈಗಾಗಲೇ ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿ ಅವರಿಂದ ಸ್ಕಾರ್ಪಿಯೋ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಈತನ ವಿರುದ್ಧ ಈ ಹಿಂದೆ ಬಜ್ಪೆ ಪೊಲೀಸ್ ಠಾಣೆಯಲ್ಲಿ 3, ಬಂಟ್ವಾಳ ಪೊಲೀಸ್ ಠಾಣೆಯಲ್ಲಿ 1, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1, ಬೈಂದೂರು ಠಾಣೆಯಲ್ಲಿ 1, ಹಾಸನ ಪೊಲೀಸ್ ಠಾಣೆಯಲ್ಲಿ 1 ಒಟ್ಟು 7 ದನಗಳ್ಳತನ ಪ್ರಕರಣಗಳು ದಾಖಲಾಗಿವೆ. ಅಲ್ಲದೆ ಈತನ ವಿರುದ್ಧ ಬಜ್ಪೆ, ಕಾರ್ಕಳ ಗ್ರಾಮಾಂತರ ಹಾಗೂ ಬೈಂದೂರು ಪೊಲೀಸ್ ಠಾಣೆಯಲ್ಲಿ ನ್ಯಾಯಾಲಯದಿಂದ ಹೊರಡಿಸಿದ ಬಂಧನ ವಾರಂಟ್ ಇತ್ತು.

ಸಿಸಿಬಿ ಇನ್‌ಸ್ಪೆಕ್ಟರ್ ಶಾಂತರಾಮ, ಪಿಎಸ್ಸೈ ಶ್ಯಾಮ್ ಸುಂದರ್ ಎಚ್.ಎಂ ಮತ್ತು ಎಚ್.ಡಿ. ಕಬ್ಬಾಳ್ ರಾಜ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News